ಕೊಪ್ಪಳ: ಬೃಹತ್ ಶಿಲಾಯುಗದ ನೆಲೆ ಎಂದೇ ಪ್ರಸಿದ್ಧಿ ಪಡೆದ ಹಾಗೂ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ತಾತ್ಕಾಲಿಕ ಸ್ಥಾನ ಪಡೆದಿರುವ ಹಿರೇಬೆನಕಲ್ ಮೊರೇರ ಬೆಟ್ಟದಲ್ಲಿನ ಸಮಾಧಿ ಸ್ಥಳಗಳ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್ ಹೇಳಿದರು.
ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆನಕಲ್ ಮೊರೇರ ಬೆಟ್ಟದಲ್ಲಿರುವ ಬೃಹತ್ ಶಿಲಾಯುಗದ ಸಮಾಧಿ ಸ್ಥಳಗಳ ಸಂರಕ್ಷಣೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರೇಬೆನಕಲ್ ಮೊರೇರ ಬೆಟ್ಟಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಅರಣ್ಯ ಸಂರಕ್ಷಣೆಯ ಜತೆಗೆ ಬೆಟ್ಟದ ಅಭಿವೃದ್ಧಿಗೂ ಕ್ರಮ ಕೈಗೊಳ್ಳಬೇಕಿದ್ದು, ಈ ಹಿನ್ನೆಲೆಯಲ್ಲಿ ಮೋರೆರ್ ಬೆಟ್ಟದ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಸಿಸಿಟಿವಿ ಅಳವಡಿಕೆ ಎಪಿಸಿ ಕ್ಯಾಂಪ್, ಸೋಲಾರ್ ಲೈಟ್ ಅಳವಡಿ, ವಾಚ್ ಟವರ್, ಬೋರ್‌ವೆಲ್ & ಪಂಪ್, ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ,ಶೌಚಾಲಯ, ಪ್ರವೇಶ ಕಮಾನು, ಗೇಟ್, ಆಸನ ವ್ಯವಸ್ಥೆ ಹೀಗೆ ವಿವಿಧ ಸೌಲಭ್ಯ ಕಲ್ಪಿಸುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಿ ಈ ಎಲ್ಲ ಕಾಮಗಾರಿ ಕೂಡಲೇ ಪ್ರಾರಂಭಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹಿರೇಬೆನಕಲ್ ಮೊರೇರ ಬೆಟ್ಟದಲ್ಲಿ ಪ್ರತಿನಿತ್ಯ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಹ್ನ 2 ರಿಂದ ಸಂಜೆ 6 ಗಂಟೆಯವರಿಗೆ ಪುರಾತತ್ವ ಇಲಾಖೆ (ಎ.ಎಸ್.ಐ) ವತಿಯಿಂದ ಮೂರು ಜನರು ರಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಟ್ಟದಲ್ಲಿ ರಾತ್ರಿ ವೇಳೆಯಲ್ಲಿಯೂ ರಕ್ಷಕರನ್ನು ನಿಯೋಜಿಸುವುದು ಅತ್ಯವಶ್ಯಕವಾಗಿದ್ದು, ಮತ್ತಿಬ್ಬರು ಸ್ಮಾರಕ ಮಿತ್ರರನ್ನು ನೇಮಿಸಿಕೊಳ್ಳುವ ವ್ಯವಸ್ಥೆಯಾಗಬೇಕು. ಈ ಬಗ್ಗೆ ಅರಣ್ಯ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಅರಣ್ಯ ಇಲಾಖೆಯ ರಕ್ಷಕರು ರಾತ್ರಿ ವೇಳೆ ಈ ಪ್ರದೇಶದಲ್ಲಿ ಗಸ್ತು ಹಾಕಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಮಾತನಾಡಿ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಮೊರೇರ ಬೆಟ್ಟದ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿ ₹ 80 ಲಕ್ಷಗಳ ಅನುದಾನ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ. ಮೊರೇರ ಬೆಟ್ಟದ ಸ್ಮಾರಕಗಳ ರಕ್ಷಣೆಗೆ ಸರ್ವ ರೀತಿಯಲ್ಲಿಯೂ ಪ್ರಯತ್ನಿಸಲಾಗುವುದು ಎಂದರು.ಹಿರೇಬೆಣಕಲ್ ಮೊರೇರ ಬೆಟ್ಟದ ಇತಿಹಾಸದ ಕುರಿತು ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ, ಗಂಗಾವತಿ ವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ ಸೇರಿದಂತೆ ಪುರಾತತ್ವ ಇಲಾಖೆ, ಗಂಗಾವತಿಯ ಕಂದಾಯ ಮತ್ತು ತಾಪಂ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಗಳಿದ್ದರು.
