ವಿರಾಜಪೇಟೆ: ಅಳಿವಿನಂಚಿನಲ್ಲಿರುವ ಕೊಡವ ಭಾಷೆಯನ್ನು ಉಳಿಸಲು ಹೆಚ್ಚು ಅಧ್ಯಯನ ಪುಸ್ತಕಗಳು ರಚನೆಯಾಗಬೇಕು. ಕೊಡವ ಸಾಹಿತ್ಯದ ಬಗ್ಗೆ ಆಸಕ್ತಿ ತೋರಿ ಪುಸ್ತಕ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ನ ಅಧ್ಯಕ್ಷೆ ಐಚಂಡ ರಶ್ಮಿ ಮೇದಪ್ಪ ಹೇಳಿದರು.ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವತಿಯಿಂದ ನಡೆದ 17ನೇ ವರ್ಷದ ಕಕ್ಕಡ ನಮ್ಮೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಡವ ಭಾಷೆಗೆ ಆದ್ಯತೆ ನೀಡುವ ಉದ್ದೇಶದಿಂದ ಕೊಡವ ಭಾಷೆಯ ಮತ್ತು ಕೊಡಗಿಗೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನು ಒಂದೇ ಸೂರಿನಡಿ ಸಿಗುವಂತೆ ಮಾಡುವ ಉದ್ದೇಶವನ್ನು ಪೊಮ್ಮಕ್ಕಡ ಪರಿಷತ್ ಹೊಂದಿದೆ. ಕೊಡಗು ಎಜುಕೇಷನ್ ಸೋಷಿಯಲ್ ಸರ್ವಿಸ್ ಟ್ರಸ್ಟ್ ಪುಸ್ತಕ ಪತ್ತಾಯಕ್ಕೆ ದಾನಿಗಳಾಗಿ ಪೊಮ್ಮಕ್ಕಡ ಪರಿಷತ್ ಗೆ ಸಹಕಾರ ನೀಡಿದೆ ಎಂದರು.ಪುಸ್ತಕ ಪತ್ತಾಯ ಉದ್ಘಾಟಿಸಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಹೇಶ್ ನಾಚಯ್ಯ ಅವರು ಪ್ರಕೃತಿಯೊಂದಿಗೆ ಬೆರೆತಿರುವ ಕೊಡವ ಸಂಸ್ಕೃತಿ, ಆಚಾರ, ವಿಚಾರ ಮತ್ತು ಕೊಡವರ ಅತಿಥಿ ಸತ್ಕಾರದ ಗತವೈಭವವನ್ನು ಸ್ಮರಿಸಿದರು. ಕೊಡವ ಸಾಹಿತ್ಯದ ಬೆಳವಣಿಗೆಗೆ ಓದುಗರ ಸಂಖ್ಯೆ ಹೆಚ್ಚಾಗಬೇಕೆಂದರು.ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಕೊಡವ ಪದ್ಧತಿಯಂತೆ ಒಕ್ಕಣೆ ಕಟ್ಟಿ ಪತ್ತಾಯ ತೆರೆದು ಮಾತನಾಡಿ ಕೊಡವ ಹಬ್ಬಗಳ ಮೂಲವಾದ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಆಶಿಸಿದರು.

ಅತಿಥಿಗಳಾಗಿ ಪಾಲ್ಗೊಂಡು ಕೊಡಗು ಎಜುಕೇಷನ್ ಸೋಷಿಯಲ್ ಸರ್ವಿಸ್ ಟ್ರಸ್ಟ್ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ ಅವರು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸದಾ ಸಿದ್ಧವಿದೆ ಎಂದರು.ಮತ್ತೊಬ್ಬ ಅತಿಥಿ ಪೊಮ್ಮಕ್ಕಡ ಪರಿಷತ್ ನ ಮಾಜಿ ಉಪಾಧ್ಯಕ್ಷೆ ಮಳವಂಡ ಪೂವಿ ಮುತ್ತಪ್ಪ ಅವರು ಮಾತನಾಡಿ ಪರಿಷತ್ತು ಮಾಡುವ ಉತ್ತಮ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಅಖಿಲ ಕೊಡವ ಸಮಾಜದ ಮಾಜಿ ನಿರ್ದೇಶಕಿ ಹಾಗೂ ಪೊಮ್ಮಕ್ಕಡ ಪರಿಷತ್ ನ ನಿರ್ದೇಶಕಿ ಮೂವೇರ ರೇಖ ಪ್ರಕಾಶ್ ಅವರು ಕಕ್ಕಡ ಅಂದ್ ಇಂದ್ ಎನ್ನುವ ವಿಚಾರವನ್ನು ಮಂಡಿಸಿದರು. ಪುಸ್ತಕ ದಾನಿಗಳ ಹೆಸರನ್ನು ಖಜಾಂಚಿ ಧರಣಿ ಸಭೆಯ ಗಮನಕ್ಕೆ ತಂದರು.

ನಿರ್ದೇಶಕಿ ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ಕಾರ್ಯದರ್ಶಿ ಕೋಡಂಗಡ ಡೈನಾ ಸ್ವಾಗತಿಸಿ, ಉಪಾಧ್ಯಕ್ಷೆ ಕರವಂಡ ಸರಸು ವಂದಿಸಿದರು. ಸುಳ್ಳಿಮಾಡ ಶಿಲ್ಪ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಮಂಡೇಪಂಡ ತ್ಯಾಗಿ, ಮಾಚಿಮಂಡ ಪುಷ್ಪ, ಕಡೇಮಾಡ ಕವಿತ, ಪಟ್ರಪಂಡ ಗೀತಾ, ನೂರೇರ ರತಿ, ಅಚ್ಚಕಾಳೆರ ಸವಿತ, ಮೊಣ್ಣಂಡ ವಿನು, ಚೇನಂಡ ಅಕ್ಷಿತ ಹಾಗೂ ಪೊಮ್ಮಕ್ಕಡ ಪರಿಷತ್ ನ ಸದಸ್ಯರು, ಕೇಂದ್ರೀಯ ಸಮಿತಿಯ ನಿರ್ದೇಶಕರು, ಮಾಜಿ ಸದಸ್ಯರುಗಳು ಉಪಸ್ಥಿತರಿದ್ದರು.ಖಾದ್ಯ ವೈವಿಧ್ಯ: ವಿರಾಜಪೇಟೆಯ ಅಖಿಲ ಕೊಡವ ಸಮಾಜದಲ್ಲಿ ಸಂಭ್ರಮದಿಂದ ನಡೆದ ಕಕ್ಕಡ ನಮ್ಮೆ ಯಲ್ಲಿ ಪರಿಷತ್ ನ ಆಡಳಿತ ಮಂಡಳಿಯ ಪದಾಧಿಕಾರಿಗಳು ತಯಾರಿಸಿದ್ದ ಕಕ್ಕಡ ಖಾದ್ಯ ಗಳೊಂದಿಗೆ ಭೋಜನ ಸವಿದು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.