ಸರ್ಕಾರವು ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್‌ಮಸಾಲಾ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಗೆ ಒಂದು ವರ್ಷದ ನಿಷೇಧ ಹೇರಿರುವುದನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಗೌರವಿಸುತ್ತದೆ. ಆದರೆ, ಈ ನಿರ್ಧಾರದ ಯಾವುದೇ ರೀತಿಯಿಂದಲೂ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀಳದಂತೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.

ಪುತ್ತೂರು: ಸರ್ಕಾರವು ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್‌ಮಸಾಲಾ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಗೆ ಒಂದು ವರ್ಷದ ನಿಷೇಧ ಹೇರಿರುವುದನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಗೌರವಿಸುತ್ತದೆ. ಆದರೆ, ಈ ನಿರ್ಧಾರದ ಯಾವುದೇ ರೀತಿಯಿಂದಲೂ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀಳದಂತೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.

ತಂಬಾಕು ಮತ್ತು ನಿಕೋಟಿನ್ ಹೊಂದಿರುವ ನಿಷೇಧಿತ ಉತ್ಪನ್ನಗಳು ಹಾಗೂ ಸಾಂಪ್ರದಾಯಿಕವಾಗಿ ಕೃಷಿ ಮಾಡಲಾಗುತ್ತಿರುವ ಅಡಿಕೆಯನ್ನು ಒಂದೇ ದೃಷ್ಟಿಯಲ್ಲಿ ನೋಡಬಾರದು. ಗುಟ್ಕಾ ನಿಷೇಧವೆಂದರೆ ಅಡಿಕೆ ನಿಷೇಧವಲ್ಲ. ತಂಬಾಕು–ನಿಕೋಟಿನ್ ಉತ್ಪನ್ನಗಳ ವಿರುದ್ಧ ಸರ್ಕಾರ ಕೈಗೊಳ್ಳುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅಡಿಕೆಯ ಕೃಷಿ, ಮಾರುಕಟ್ಟೆ ಮತ್ತು ಬೆಳೆಗಾರರ ಜೀವನೋಪಾಯದ ಮೇಲಿನ ಕ್ರಮವಾಗಿ ಪರಿಗಣಿಸಬಾರದು ಎಂದು ಸಂಘಟನೆ ಒತ್ತಾಯಿಸಿದೆ. ಬೆಳೆಗಾರರೇ ಗಾಬರಿಗೆ ಒಳಗಾಗಬೇಡಿ: ಈ ಹಿಂದಿನ ಅನುಭವಗಳನ್ನೂ ಗಮನಿಸಿದರೆ, ಗುಟ್ಕಾ ನಿಷೇಧದಿಂದ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. 2014 ರಲ್ಲಿಯೂ ದೇಶದ ಹಲವು ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಜಾರಿಯಲ್ಲಿದ್ದ ಸಂದರ್ಭದಲ್ಲಿಯೇ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡಿರುವುದನ್ನು ಗಮನಿಸಬಹುದು. ಹೀಗಾಗಿ ಗುಟ್ಕಾ ನಿಷೇಧದ ಪರಿಣಾಮವನ್ನು ಅಡಿಕೆಯ ಮಾರುಕಟ್ಟೆಯೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಹೀಗಾಗಿ ಅಡಿಕೆ ಬೆಳೆಗಾರರು ಕೂಡಾ ಯಾವುದೇ ಗಾಬರಿಗೆ ಒಳಗಾಗಬಾರದು ಎಂದು ಸಂಘವು ಹೇಳಿದೆ.

ಈಗ ಅಡಿಕೆಯ ಬೇಡಿಕೆ, ದೇಶೀಯ ಬಳಕೆ, ಕೈಗಾರಿಕಾ ಬಳಕೆ, ರಫ್ತು ಹಾಗೂ ವಿವಿಧ ಮಾರುಕಟ್ಟೆಗಳಿಗೆ ಆಗುತ್ತಿರುವ ಪೂರೈಕೆಯ ಕುರಿತು ಸಮಗ್ರ ಅಧ್ಯಯನ ನಡೆಸಬೇಕು. ಅಕ್ರಮ ಹಾಗೂ ಅನಗತ್ಯ ಆಮದುಗಳಿಂದ ದೇಶೀಯ ಅಡಿಕೆ ಮಾರುಕಟ್ಟೆಯ ಮೇಲೆ ತೊಂದರೆಯಾಗದಂತೆ ಆಮದು ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅಡಿಕೆಗೆ ನಿಗದಿಪಡಿಸಿರುವ ಕನಿಷ್ಠ ಆಮದು ಬೆಲೆಯೂ ಕಟ್ಟುನಿಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಘವು ಆಗ್ರಹಿಸಿದೆ.

ದೇಶದ ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನೋಪಾಯ ಅಡಿಕೆ ಕೃಷಿಯೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ಯಾವುದೇ ತಂಬಾಕು ವಿರೋಧಿ ಸಾರ್ವಜನಿಕ ಆರೋಗ್ಯ ನೀತಿಯ ಹೊರೆ ಅಡಿಕೆ ಬೆಳೆಗಾರರ ಮೇಲೆ ಬೀಳದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀತಿ ರೂಪಿಸಬೇಕು.

ಇದೆಲ್ಲದರ ಹೊರತಾಗಿಯೂ ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನಾಡಿ, ಆರ್ಥಿಕ ಮೂಲವೂ ಆಗಿರುವ ಅಡಿಕೆ ಮಾರುಕಟ್ಟೆಯಲ್ಲಿ ಒಂದು ವೇಳೆ ಬೆಲೆ ಕುಸಿತ ಉಂಟಾದಲ್ಲಿ ಬೆಳೆಗಾರರನ್ನು ರಕ್ಷಿಸಲು ಮಾರುಕಟ್ಟೆ ಸ್ಥಿರೀಕರಣ ವ್ಯವಸ್ಥೆಯನ್ನು ಕೂಡಾ ಸರ್ಕಾರ ಪರಿಗಣನೆ ಮಾಡಬೇಕು. ನಿಷೇಧಿತ ತಂಬಾಕು–ನಿಕೋಟಿನ್ ಉತ್ಪನ್ನಗಳ ವಿರುದ್ಧದ ಕ್ರಮಕ್ಕೆ ಅಡಿಕೆ ಬೆಳೆಗಾರರ ಸಂಘದ ಯಾವುದೇ ವಿರೋಧವಿಲ್ಲ. ಅಡಿಕೆಯ ಪರ್ಯಾಯ ಬಳಕೆಯೂ ಈಗಾಗಲೇ ಇದೆ. ಅಡಿಕೆಯ ಸಿಹಿ ಸುಪಾರಿ, ಚಹಾ ಸೇರಿದಂತೆ ಇತರ ಉತ್ಪನ್ನಗಳೂ ಇವೆ. ಹೀಗಾಗಿ ಈಗ ಕ್ರಮದ ಹೆಸರಿನಲ್ಲಿ ಅಡಿಕೆ ಬೆಳೆಗಾರರು, ಅಡಿಕೆ ವ್ಯಾಪಾರಿಗಳು ಅಥವಾ ಕಾನೂನುಬದ್ಧ ಅಡಿಕೆ ಮಾರುಕಟ್ಟೆಗೆ ಅನಗತ್ಯ ತೊಂದರೆ ಉಂಟಾಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸುತ್ತದೆ ಎಂದು ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿ ಸಿ ಜಿ ವೆಂಕಟಗಿರೀಶ್‌ ತಿಳಿಸಿದ್ದಾರೆ.