ಕನ್ನಡಪ್ರಭ ವಾರ್ತೆ ಮಡಿಕೇರಿ

ಪವರ್ ಮ್ಯಾನ್/ ಲೈನ್‌ಮ್ಯಾನ್‌ಗಳು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯುತ್ ಕೆಲಸವು ಸೂಕ್ಷ್ಮ ಆಗಿರುವುದರಿಂದ ಒತ್ತಡಕ್ಕೊಳಗಾಗಬಾರದು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸಲಹೆ ನೀಡಿದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಗರದ ಸೆಸ್ಕ್ ವಿಭಾಗೀಯ ಕಚೇರಿಯಲ್ಲಿ ಶನಿವಾರ ನಡೆದ ‘ಪವರ್‌ಮ್ಯಾನ್ /ಲೈನ್‌ಮ್ಯಾನ್‌ಗಳ’ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪವರ್ ಮ್ಯಾನ್‌ಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಕಾರಣಕ್ಕೂ ವಿಚಲಿತರಾಗದೆ ವಿದ್ಯುತ್ ನಿಯಮಗಳನ್ನು ಖಾತರಿಪಡಿಸಿಕೊಂಡು ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಮನೆ, ಕಚೇರಿ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ವಿದ್ಯುತ್ ಪೂರೈಕೆ ಅನಿವಾರ್ಯ ಮತ್ತು ಅತ್ಯಗತ್ಯವಾಗಿದೆ. ಸಿಬ್ಬಂದಿ ಪ್ರತಿನಿತ್ಯ ಶ್ರಮದಿಂದ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಸಂದರ್ಭದಲ್ಲಿ ಹೆಚ್ಚಿನ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳು ಹಾನಿಯಾಗುವ ಸಾಧ್ಯತೆ ಇದ್ದು, ಈ ಸಂಧರ್ಭದಲ್ಲಿ ಅಪಾಯವನ್ನು ಲೆಕ್ಕಿಸದೆ ವಿದ್ಯುತ್ ಪೂರೈಕೆಗೆ ಶ್ರಮಿಸುತ್ತಾರೆ ಎಂದರು. ವಿದ್ಯುತ್ ಕೆಲಸದ ಸಂದರ್ಭದಲ್ಲಿ ಹೆಲ್ಮೆಟ್, ಕೈಗವಸು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಲೈನ್‌ಮ್ಯಾನ್‌ಗಳು ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ಆದರೆ ಅತಿಯಾದ ಆತ್ಮವಿಶ್ವಾಸ ಬೇಡ. ಲೈನ್‌ಮ್ಯಾನ್‌ಗಳು ಪ್ರತಿನಿತ್ಯ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡಬೇಕು. ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಹಾಗೇಯೇ ಜಿಲ್ಲಾಡಳಿತ ಜತೆ ಕೈಜೋಡಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಘಟಕ ಅಧ್ಯಕ್ಷ ಮಂದ್ರೀರ ಮೋಹನ್‌ದಾಸ್ ಮಾತನಾಡಿ, ಹತ್ತು ನಿಮಿಷ ವಿದ್ಯುತ್ ಪೂರೈಕೆ ಇಲ್ಲದಿದ್ದರೆ ವಿಚಲಿತರಾಗುತ್ತೇವೆ. ಆದ್ದರಿಂದ ಲೈನ್‌ಮ್ಯಾನ್‌ಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿ ಕಠಿಣ ಪರಿಸ್ಥಿತಿ ಎದುರಿಸಿ, ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿರುವುದು ಶ್ಲಾಘನೀಯ ಎಂದರು. ಹಿರಿಯ ಲೈನ್‌ಮ್ಯಾನ್ ರತ್ನಯ್ಯ ಮತ್ತು ಶಿವಣ್ಣ ಮಾತನಾಡಿ, ಪವರ್ ಮ್ಯಾನ್‌ಗಳು ಶ್ರದ್ಧೆಯಿಂದ ಪ್ರತಿನಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ನಿಯಮಗಳನ್ನು ಪಾಲಿಸಿಕೊಂಡು ಕರ್ತವ್ಯ ನಿರ್ವಹಿಸಿದರೂ ಆಗಾಗ ಅಪಾಯಗಳು ಸಂಭವಿಸುತ್ತವೆ. ಇಂತಹ ಅಪಾಯಗಳು ಎದುರಾಗದಂತೆ ಎಚ್ಚರ ವಹಿಸಬೇಕು ಎಂದರು.

ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಮಾತನಾಡಿ, ಲೈನ್‌ಮ್ಯಾನ್‌ಗಳ ಕೊರತೆ ನಡುವೆಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿನಯ್‌ ಕುಮಾರ್ ಮಾತನಾಡಿದರು. ಸಹಾಯಕ ಎಂಜಿನಿಯರ್ ತೇಜಾ, ಹೇಮಂತ್ ಕುಮಾರ್, ಲೆಕ್ಕಾಧಿಕಾರಿ ದರ್ಶನ್, ಸುದೀಪ್, ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಮತಾರಾಜ್, ನಾಗರಾಜು ಇತರರು ಇದ್ದರು.ಕೇಕ್ ಕತ್ತರಿಸುವ ಮೂಲಕ ಪವರ್‌ಮ್ಯಾನ್‌ಗಳ ದಿನವನ್ನು ಸಂತಸದಿಂದ ಆಚರಿಸಲಾಯಿತು. ಸಿಬ್ಬಂದಿಗಳಾದ ರತ್ನಮಂಜರಿ ಪ್ರಾರ್ಥಿಸಿದರು, ಪದ್ಮಶ್ರೀ ನಿರೂಪಿಸಿದರು.