ಹೊಸ ವರ್ಷಾಚರಣೆಯ ಸಂಭ್ರಮಾಚರಣೆ ಮಧ್ಯೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಜಾರಿಗೊಳಿಸಿದೆ. ನಂದಿಬೆಟ್ಟ ಪ್ರವೇಶದ ಜತೆಗೆ ಹೋಟೆಲ್‌, ರೆಸಾರ್ಟ್‌, ಹೋಂಸ್ಟೇಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಹಲವು ಷರತ್ತು ಹೇರಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ನಂದಿ ಹೋಬಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಂದಿಗಿರಿಧಾಮಕ್ಕೆ ಡಿ. 31 ರ ಮಧ್ಯಾಹ್ನ 3.00 ಗಂಟೆಯಿಂದ 2026ರ ಜನವರಿ 1 ರ ಬೆಳಗ್ಗೆ 10 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ರವರು ಈ ಆದೇಶ ಹೊರಡಿಸಿದ್ದಾರೆ. ಈ ಕುರಿತು ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸಬೇಕು ಎಂದು ಅ‍ವರು ಕೋರಿದ್ದಾರೆ.

ಸಂಭ್ರಮಾಚರಣೆಗೆ ಷರತ್ತು

ಜಿಲ್ಲೆ ಹೊಸ ವರ್ಷಾಚರಣೆಯ ಸಂಭ್ರಮಾಚರಣೆ ಮಧ್ಯೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಜಾರಿಗೊಳಿಸಿದೆ. ನಂದಿಬೆಟ್ಟ ಪ್ರವೇಶದ ಜತೆಗೆ ಹೋಟೆಲ್‌, ರೆಸಾರ್ಟ್‌, ಹೋಂಸ್ಟೇಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಹಲವು ಷರತ್ತು ಹೇರಲಾಗಿದೆ. ಕುಡಿದು ವಾಹನ ಚಾಲನೆ, ಅಪಘಾತ, ಪರಿಸರ ಮಾಲಿನ್ಯ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನಂದಿಗಿರಿಧಾಮ ಪ್ರವೇಶಕ್ಕೇನೋ ನಿರ್ಬಂಧ ಹೇರಲಾಗಿದೆ. ಆದರೆ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್, ರೆಸಾರ್ಟ್‌ ಹೋಮ್‌ ಸ್ಟೇಗಳಲ್ಲಿ ಬುಕ್ಕಿಂಗ್‌ ಭರ್ಜರಿಯಾಗಿ ನಡೆದಿದೆ. ವಾರಕ್ಕೂ ಮೊದಲೇ ರೂಂಗಳನ್ನು ಬುಕ್‌ ಮಾಡಿದ್ದು, ಬಹುತೇಕ ಬುಕ್ಕಿಂಗ್‌ ಭರ್ತಿಯಾಗಿದೆ. ಅಲ್ಲದೇ ಹೊಸ ವರ್ಷಕ್ಕೆ ಹಲವು ಆಫರ್‌ಗಳನ್ನು ನೀಡಲಾಗಿದೆ.

ಜನವರಿ 1ರಂದು ಅ‍ವಕಾಶ

ಡಿಸೆಂಬರ್ 31ರ ರಾತ್ರಿ ಸಂಭ್ರಮಾಚರಣೆಗೆ ಹಲವು ನಿರ್ಬಂಧಗಳನ್ನು ಹೇರಲು ನಿರ್ಧರಿಸಲಾಗಿದೆ. ಆದರೆ ಜ.1ರ ಬೆಳಗ್ಗೆ ಎಲ್ಲೆಡೆ ಮುಕ್ತ ಅವಕಾಶ ನೀಡಲಾಗಿದೆ. ಈಗಾಗಲೇ ಹಲವು ರೆಸಾರ್ಟ್‌, ಹೋ ಸ್ಟೇಗಳಲ್ಲಿ, ಹೋಟೆಲ್‌ಗಳಲ್ಲಿ ಬುಕ್ಕಿಂಗ್‌ ಆಗಿದೆ. ಜತೆಗೆ ಹೊಸ ವರ್ಷಾಚರಣೆಗೆಂದೇ ಕೆಲವು ರೆಸಾರ್ಟ್‌, ಹೋಟೆಲ್‌ಗಳಲ್ಲಿ ಪ್ಯಾಕೇಜ್‌ ಘೋಷಣೆ ಮಾಡಲಾಗಿದ್ದು, ಭರ್ಜರಿ ತಯಾರಿಗಳು ನಡೆದಿವೆ.ಹೊಸವರ್ಷ ಆಚರಣೆ ವೇಳೆ ಜಿಲ್ಲೆಯ ಪ್ರವಾಸಿ ತಾಣಗಳು ತುಂಬಿ ತುಳುಕುವುದರಲ್ಲಿ ಅನುಮಾನವೇ ಇಲ್ಲ. ಜಿಲ್ಲೆಯಲ್ಲಿ ಹೊಸ ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವ ಈಶಾ ಯೋಗ ಕೇಂದ್ರಕ್ಕೂ ಸಾವಿರಾರು ಜನರು ಭೇಟಿ ನೀಡುವ ಸಾಧ್ಯತೆ ಇದೆ. ಭೋಗನಂದಿಶ್ವರ ದೇವಸ್ಥಾನ, ಈಶಾ ಕೇಂದ್ರ, ರಂಗಸ್ಥಳ,ವಿಧುರಾಶ್ವತ್ತ, ಆವಲಬೆಟ್ಟ,ಕೈವಾರ, ಕೈಲಾಸಗಿರಿ ಹೀಗೆ ಹತ್ತು ಹಲವು ಪ್ರವಾಸಿತಾಣಗಳಲ್ಲಿ ಜನ ಕಿಕ್ಕಿರಿದು ಸೇರಲಿದ್ದಾರೆ.

ಜಿಲ್ಲೆಯ ಪಿಕ್‌ನಿಕ್‌ ಸ್ಪಾಟ್‌

ಇನ್ನೊಂದೆಡೆ ಜಿಲ್ಲೆಯಲ್ಲಿ ಪ್ರಮುಖ ಕೆರೆಗಳು ತುಂಬಿಕೊಂಡಿದ್ದು, ಕೆರೆಗಳು ಈಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಶ್ರೀನಿವಾಸಸಾಗರ, ಜಕ್ಕಲಮಡಗು, ದಂಡಿಗಾನಹಳ್ಳಿ ಕೆರೆ, ಅಮಾನಿ ಬೈರಸಾಗರ ಕೆರೆ ಹೀಗೆ ಹತ್ತು ಹಲವು ಕೆರೆಗಳು ಈಗ ಪಿಕ್‌ನಿಕ್‌ ಸ್ಪಾಟ್‌ಗಳಾಗಿ ಮಾರ್ಪಟ್ಟಿವೆ. ಇಲ್ಲೂ ಸಹಾ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವ ನಿರೀಕ್ಷೆಯೂ ಇದೆ.

ನಿಯಮ ಉಲ್ಲಂಘಿಸಿದರೆ ಕ್ರಮ: ಎಸ್ಪಿ

ಹೊಸ ವರ್ಷಾಚರಣೆ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ, ಹೋಟೆಲ್‌ ಮತ್ತು ರೆಸಾರ್ಟ್‌ಗಳಲ್ಲಿಹೊಸ ವರ್ಷಾಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗುವುದು. ಮತ್ತು ಬೈಕ್ ವ್ಹೀಲಿಂಗ್ ಸೇರಿದಂತೆ ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಲ್‌ ಚೌಕ್ಸೆ ತಿಳಿಸಿದ್ದಾರೆ.