ಕನ್ನಡ ಸಾಹಿತ್ಯ ಹಾಗೂ ಭಾಷೆಗೆ, ಕನ್ನಡಿಗರ ಬದುಕು ಹಾಗೂ ಜಾಗೃತಿಗೆ, ಸಮಾಜ ಹಾಗೂ ನಾಡಿನ ಐಕ್ಯತೆಗೆ ಮಹಾನ್ ಕೊಡುಗೆ
ಕನ್ನಡಪ್ರಭ ವಾರ್ತೆ ಮೈಸೂರುಕನ್ನಡ ಸಾಹಿತ್ಯ ಲೋಕಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾಕವಿ ಕುವೆಂಪು ಅವರ ಉದಯರವಿ ನಿವಾಸವನ್ನು ಸ್ಮಾರಕ ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮೇಯರ್ ಸಂದೇಶ್ ಸ್ವಾಮಿ ಒತ್ತಾಯಿಸಿದ್ದಾರೆ.ಬಿಜೆಪಿ ಎನ್.ಆರ್. ಕ್ಷೇತ್ರದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತವಾಗಿ ಗನ್ ಹೌಸ್ ಬಳಿ ಇರುವ ಕವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ಕುವೆಂಪು ಅವರ ಜನ್ಮಭೂಮಿ ಕುಪ್ಪಳ್ಳಿ. ಕರ್ಮಭೂಮಿ ಮೈಸೂರು. ಕವಿವರ್ಯರ ಇಲ್ಲಿನ ವಿ.ವಿ. ಮೊಹಲ್ಲಾದ ಸ್ವಂತ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸುವುದು ಅವಶ್ಯಕ. ಬಾಲ್ಯದಲ್ಲಿ ಇಲ್ಲಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಯಾಗಿದ್ದ ಕುವೆಂಪು ಅವರು ಮೈಸೂರು ವಿವಿಯಿಂದ ಪದವಿ ಪಡೆದು, ಇಲ್ಲಿಯೇ ಪ್ರಾಧ್ಯಾಪಕರಾಗಿ, ಆನಂತರ ಅದೇ ವಿವಿಯ ಕುಲಪತಿಯಾಗಿ ಸೇವೆ ಸಲ್ಲಿಸಿದವರು. ತಮ್ಮ ಬದುಕಿನ ಬಹುಕಾಲ ಮೈಸೂರಿನಲ್ಲಿಯೇ ಸಾಗಿಸಿದವರು. ಹಾಗಾಗಿ ಅವರ ನಿವಾಸವನ್ನು ಸ್ಮಾರಕವನ್ನಾಗಿ ರೂಪಿಸಿ, ಮಹಾಕವಿಯ ಜೀವನ ವೃತಾಂತವನ್ನು, ವಿಶ್ವಮಾನವ ಸಂದೇಶಗಳನ್ನು, ರಚಿಸಿದ ಕೃತಿಗಳನ್ನು, ಬದುಕಿನ ಸಾಧನೆ ಮತ್ತು ಸೇವೆಗಳನ್ನು, ಬಳಸಿದ ವಸ್ತು ಮತ್ತು ಪರಿಕರಗಳನ್ನು ಹಾಗೂ ಛಾಯಾಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಅವರು ತಿಳಿಸಿದರು.ಕನ್ನಡ ಸಾಹಿತ್ಯ ಹಾಗೂ ಭಾಷೆಗೆ, ಕನ್ನಡಿಗರ ಬದುಕು ಹಾಗೂ ಜಾಗೃತಿಗೆ, ಸಮಾಜ ಹಾಗೂ ನಾಡಿನ ಐಕ್ಯತೆಗೆ ಮಹಾನ್ ಕೊಡುಗೆ ನೀಡಿರುವ ವಿಶ್ವಕವಿ ಕುವೆಂಪು ಅವರಿಗೆ ಭಾರತರತ್ನ ಪುರಸ್ಕಾರಕ್ಕೆ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಒತ್ತಾಯಿಸಿದರು.ಈ ವೇಳೆ ಬಿಜೆಪಿ ಎನ್.ಆರ್. ಕ್ಷೇತ್ರದ ಅಧ್ಯಕ್ಷ ಎಸ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಪದ್ಮನಾಭ, ಸಿ. ಮಂಜು, ಸು. ಮುರಳಿ, ಎಚ್.ಜಿ. ಗಿರೀಧರ್, ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್, ಮುಖಂಡರಾದ ಸಂಪತ್, ಆನಂದ್, ನಾಣಿ, ಪ್ರಸಾದ್, ಶಿವಕುಮಾರ್, ಮಹಾದೇವ್, ಜಗದೀಶ್, ಮಣಿರತ್ನಂ, ಕಾರ್ತಿಕ್, ನವೀನ್, ಶೇಖರ್, ಕವಿತಾ ಸಿಂಗ್, ಕೃಷ್ಣಮೂರ್ತಿ ಮೊದಲಾದವರು ಇದ್ದರು.