ರಾಮನಗರ ಕ್ಷೇತ್ರದಲ್ಲಿ ಖಬರಿಸ್ತಾನ, ಶಾದಿ ಮಹಲ್ , ಮಸೀದಿಗಳ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಿದ್ದೇನೆ. ಶ್ರೀ ರೇವಣ ಸಿದ್ಧೇಶ್ವರ, ರಾಮದೇವರ ಬೆಟ್ಟದ ಅಭಿವೃದ್ಧಿಗೆ ಆದ್ಯತೆ ನೀಡುವ ನಾನು ಮಸೀದಿಗಳ ಅಭಿವೃದ್ಧಿಗೂ ಅಷ್ಟೇ ಒತ್ತು ನೀಡುತ್ತೇನೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾ ಕೇಂದ್ರ ರಾಮನಗರದ ಪ್ರಮುಖ 10 ವೃತ್ತಗಳಲ್ಲಿ ಕಾರಂಜಿ, ಹೈಮಾಸ್ಟ್ ದೀಪಗಳನ್ನು ಅಳವಡಿಸುವ ಮೂಲಕ ಸೌಂದರ್ಯೀಕರಣಕ್ಕೆ ಕ್ರಮ ವಹಿಸಲಾಗಿದ್ದು, ಇದಕ್ಕಾಗಿ 10 ಕೋಟಿ ರುಪಾಯಿ ಮೀಸಲಿಡಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ನಗರದ 16ನೇ ವಾರ್ಡ್ ಮೋತಿ ನಗರದಲ್ಲಿ ಸೋಮವಾರ ಶಾದಿಮಹಲ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಹಳೇ ಬಸ್ ನಿಲ್ದಾಣ ವೃತ್ತ, ಐಜೂರು ವೃತ್ತ, ವಾಟಾರ್ ಟ್ಯಾಂಕ್ ವೃತ್ತ ಸೇರಿದಂತೆ 10 ಪ್ರಮುಖ ವೃತ್ತಗಳನ್ನು ಸೌಂದರ್ಯೀಕರಣಕ್ಕೆ ಗುರುತಿಸಲಾಗಿದೆ ಎಂದರು.
ಪೊಲೀಸ್ ಭವನದ ವೃತ್ತದಿಂದ ರೇಲ್ವೆ ನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿಗಾಗಿ 12.50 ಕೋಟಿ ರುಪಾಯಿ ಮಿಸಲಿಡಲಾಗಿದೆ. ಫೂಲ್ ಬಾಗ್ ನಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಅದೇ ರೀತಿ ನಾಲಬಂದವಾಡಿಯಲ್ಲಿ ಸೇತುವೆ ಅಗತ್ಯವಿದ್ದು, ಅದಕ್ಕೂ ಚಾಲನೆ ನೀಡುತ್ತೇವೆ. ಲೂರ್ದು ಚರ್ಚ್ ಬಳಿ ರೇಲ್ವೆ ಅಂಡರ್ ಪಾಸ್ ಮಾಡುವ ಸಂಬಂಧ ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ರಾಮನಗರ ಕ್ಷೇತ್ರದಲ್ಲಿ ಖಬರಿಸ್ತಾನ, ಶಾದಿ ಮಹಲ್ , ಮಸೀದಿಗಳ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಿದ್ದೇನೆ. ಶ್ರೀ ರೇವಣ ಸಿದ್ಧೇಶ್ವರ, ರಾಮದೇವರ ಬೆಟ್ಟದ ಅಭಿವೃದ್ಧಿಗೆ ಆದ್ಯತೆ ನೀಡುವ ನಾನು ಮಸೀದಿಗಳ ಅಭಿವೃದ್ಧಿಗೂ ಅಷ್ಟೇ ಒತ್ತು ನೀಡುತ್ತೇನೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.
ಇಲ್ಲಿವರೆಗೆ ನಿಮ್ಮನ್ನು ಪ್ರತಿನಿಧಿಸಿದವರು ಯಾರೂ ನಿಮ್ಮ ಕಷ್ಟ ಸುಖಗಳನ್ನು ಕೇಳಲಿಲ್ಲ. ಕೇವಲ ಅಧಿಕಾರಕ್ಕಾಗಿ ರಾಮನಗರ ಕ್ಷೇತ್ರವನ್ನು ಸೀಮಿತಗೊಳಿಸಿಕೊಂಡಿದ್ದರು. ಆದರೆ, ನೀವು ನನಗೆ ಸೇವೆ ಮಾಡಲು ಅವಕಾಶ ನೀಡಿ ಜವಾಬ್ದಾರಿ ಹೆಚ್ಚಿಸಿದ್ದೀರಿ. ಮುಸ್ಲಿಂ ಬಾಹುಳ್ಯ ಉಳ್ಳ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇಲ್ಲಿವರೆಗೆ ಆಡಳಿತ ನಡೆಸಿದವರು ಆ ಪ್ರದೇಶಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದರು. ನಾನು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ ಎಂದರು.ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ , ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಂದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯಕ್ಕೆ ಚಾಲನೆ ನೀಡಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹಕಾರ ಹಾಗೂ ನಿಮ್ಮೆಲ್ಲರ ಆಶೀರ್ವಾದದಿಂದಾಗಿ ನಾನು ಆ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು.
ವಕ್ಫ್ ಮಂಡಳಿ ವತಿಯಿಂದ ಲಭ್ಯವಾಗಿರುವ 1.20 ಕೋಟಿ ರು. ಅನುದಾನದಲ್ಲಿ ನಗರ ವ್ಯಾಪ್ತಿಯಲ್ಲಿರುವ ಮಸೀದಿಗಳ ಅಭಿವೃದ್ಧಿ ಮತ್ತು ನವೀಕರಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.ವಾರ್ಡ್ 19ರ ಮೆಹಬೂಬ್‌ನಗರದ ಇಸ್ಲಾಂ- ಮಸ್ಜಿದ್- ಎ- ಮೆಹಬೂಬಿಯ- ಅಹಲ್- ಸುನ್ನತ್- ಒ- ಜಮಾತ್ ರಿಪೇರಿ ಮತ್ತು ನವೀಕರಣ, ವಾರ್ಡ್ 15 ಪೂಲ್‌ಬಾಗ್ ಮಸೀದ್- ರಜಾ- ಅಲೀ- ಸುನ್ನತ್- ಓ- ಜಮಾತ್ ಮಸೀದಿಯ ಅಭಿವೃದ್ಧಿ, ವಾರ್ಡ್ 18ರ ಮಸ್ಸಿದ್- ಎ- ಖಾದ್ರಿಯಾ - ಅಹಲೇ - ಸುನ್ನತ್- ಓಇ- ಜಮಾತ್ ಮಸೀದಿ ದುರಸ್ತಿ, ವಾರ್ಡ್ 22ರ ಮೌಲಾ- ಅಲೀ- ಮಸೀದಿಯ ಮೊದಲ ಮಹಡಿ ಕಟ್ಟಡ ನಿರ್ಮಾಣ, ವಾರ್ಡ್ 24 ರ ಯಾರಬ್ ನಗರದ ನೂರಾನಿ ಮಸೀದಿ ದುರಸ್ತಿ ಮತ್ತು ನವೀಕರಣ ಕಾಮಗಾರಿಗಳಿಗೆ ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಚಾಲನೆ ನೀಡಿದರು.
ನಗರಸಭೆ ಸದಸ್ಯರಾದ ಮೊಯಿನ್ ಖುರೇಷಿ, ದೌಲತ್ ಷರೀಫ್, ನಿಜಾಮುದ್ದೀನ್ ಷರೀಫ್, ಆರೀಫ್, ಅಜ್ಮತ್ , ಆಯಿಷಾ ಬಾನು, ಅಣ್ಣು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಪರ್ವೇಜ್ ಪಾಷ, ಯುವ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಎಂ.ಮುಷೀರ್, ಮುಖಂಡರಾದ ಶಫಿ, ಜಬ್ಬೀರ್, ಅಜ್ಮತ್ ಉಲ್ಲಾಖಾನ್, ಇನಾಯತ್ , ಸೈಯದ್ ಯೂನಿಸ್ ಮತ್ತಿತರರು ಹಾಜರಿದ್ದರು.