ಹುಬ್ಬಳ್ಳಿ:
ಸುಸ್ಥಿರ ಹಾಗೂ ಪರಿಸರ ಸ್ನೇಹಿ ಕಾರ್ಯಾಚರಣೆಗಳತ್ತ ರೈಲ್ವೆ ಇಲಾಖೆ ಸಿಬ್ಬಂದಿ ಬದ್ಧತೆ ಪ್ರದರ್ಶಿಸಬೇಕು. ಉತ್ತಮ ಭವಿಷ್ಯಕ್ಕಾಗಿ, ಮುಂದಿನ ಪೀಳಿಗೆಗಾಗಿ ಪರಿಸರ ರಕ್ಷಣೆ ಎಲ್ಲರ ಕರ್ತವ್ಯ ಎಂದು ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಪಿ. ಅನಂತ ಹೇಳಿದರು. ಸೌರಶಕ್ತಿ, ರೈಲ್ವೆ ವಿದ್ಯುದ್ದೀಕರಣ ಸೇರಿದಂತೆ ಪರಿಸರ ಕಾಳಜಿಯ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.ಇಲ್ಲಿನ ರೈಲ್ ಸೌಧದಲ್ಲಿ ವಿಶ್ವ ಪರಿಸರ ದಿನದಂಗವಾಗಿ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಭವಿಷ್ಯ, ಹವಾಮಾನಕ್ಕಾಗಿ ಪ್ರಕೃತಿ ಪ್ರೇರಿತ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ರೈಲ್ವೆ ಇಲಾಖೆಯೂ ಪರಿಸರ ದಿನ ಆಚರಿಸುತ್ತಿದೆ. ರೈಲ್ವೆ ಸಿಬ್ಬಂದಿ ಕೇವಲ ಮೂಲಸೌಕರ್ಯ ನಿರ್ವಹಿಸುವವರಲ್ಲ, ದೇಶದ ಅತ್ಯಂತ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯ ಪಾಲಕರಾಗಿದ್ದಾರೆ ಎಂದರು.
ರೈಲ್ವೆ ಸಿಬ್ಬಂದಿಯ ದೈನಂದಿನ ನಿರ್ಧಾರಗಳು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಪರಿಸರ ಸಮತೋಲನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಪ್ರಕೃತಿಯಿಂದ ಸ್ಫೂರ್ತಿ ಪಡೆದು, ರೈಲ್ವೆ ಕಾರ್ಯಾಚರಣೆಯಲ್ಲಿ ದಕ್ಷತೆ, ಸಮನ್ವಯ ಮತ್ತು ಸ್ಥಿರತೆ ಹೆಚ್ಚಿಸಬೇಕೆಂದರು.ಹಸಿರು ಮೂಲಸೌಕರ್ಯ ಅಭಿವೃದ್ಧಿ, ಸಂಪೂರ್ಣ ವಿದ್ಯುದೀಕರಣ, ಪ್ರಮುಖ ನಿಲ್ದಾಣಗಳಲ್ಲಿ ಸೌರ ಶಕ್ತಿ ಸ್ಥಾಪನೆ ಮಾಡಲಾಗಿದೆ. ಶೂನ್ಯ ತ್ಯಾಜ್ಯ ಅಭಿಯಾನ, ನೀರಿನ ಮರುಬಳಕೆ, ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ, ಇಂಧನ ಸಂರಕ್ಷಣೆ, ಅರಣ್ಯೀಕರಣ ಮತ್ತು ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಹಾಗೂ ಕಸದ ತಡೆ ಅಭಿಯಾನದ ಬಗ್ಗೆ ತಿಳಿಸಿದರು. ಕಟ್ಟಡಗಳಲ್ಲಿ ಎಲ್ಇಡಿ ದೀಪ ಮತ್ತು ಇಂಧನ-ಕ್ಷಮ ಸಾಧನಗಳ ಬಳಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಸುಸ್ಥಿರತೆ ಒಂದು ದಿನದ ಆಚರಣೆಯಲ್ಲ, ಅದು ದೈನಂದಿನ ಕಾರ್ಯಾಚರಣೆ, ನಿರ್ವಹಣೆ ಹಾಗೂ ಯೋಜನೆಗಳಲ್ಲಿ ಅಳವಡಿಸಬೇಕಾದ ಮೌಲ್ಯ ಎಂದರು. ರೈಲು ಸಿಬ್ಬಂದಿ ಸ್ವಚ್ಛ ಹಾಗೂ ಸ್ಮಾರ್ಟ್ ರೈಲು ಸೇವೆಗಳನ್ನು ನೀಡುವ ಮೂಲಕ ಭವಿಷ್ಯದ ಪೀಳಿಗೆಗಾಗಿ ಪರಿಸರ ರಕ್ಷಿಸಬೇಕೆಂದರು.
ಈ ವೇಳೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪರಿಸರ ದಿನದ ಪ್ರತಿಜ್ಞೆ ಬೋಧಿಸಲಾಯಿತು. ನೈಋತ್ಯ ರೈಲ್ವೆ ವಲಯದಾದ್ಯಂತ 750 ಸಸಿ ನೆಡಲಾಯಿತು, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ರಾಮಮೋಹನ ರೆಡ್ಡಿ, ಮುಖ್ಯ ಮೆಕಾನಿಕಲ್ ಎಂಜಿನಿಯರ್ (ಪರಿಸರ) ಕೃಷ್ಣರಾಜ್ ಕೆ.ಕೆ. ಮತ್ತು ಇತರ ಪ್ರಮುಖ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲೂ ವಿಶ್ವ ಪರಿಸರ ದಿನ ಆಚರಿಸಲಾಯಿತು.