ಪರಿಸರ ಮತ್ತು ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವಂತಹ ಮನೋಭಾವನೆಗಳು ವಿದ್ಯಾರ್ಥಿಗಳಲ್ಲಿ ಮೂಡಲಿ ಎಂಬ ಉದ್ದೇಶದಿಂದ ಕನ್ನಡಪ್ರಭ ದಿನಪತ್ರಿಕೆ ನಡೆಸುತ್ತಿರುವ ಕರ್ನಾಟಕ ಅರಣ್ಯ- ವನ್ಯಜೀವಿ ಎಂಬ ವಿಷಯ ಕುರಿತ ಚಿತ್ರಕಲೆ ಸ್ಪರ್ಧೆ ಪರಿಸರ ಕಾಳಜಿ ಮೂಡಿಸಲು ಸಹಕಾರಿಯಾಗಿದೆ. ಇಂತಹ ಸ್ಪರ್ಧಾ ಕಾರ್ಯಕ್ರಮ ಕನ್ನಡಪ್ರಭ ಹೊಂದಿರುವ ಪರಸರ ಕಾಳಜಿಯನ್ನು ತೋರುತ್ತದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್.ಗಣೇಶ್ ಹೇಳಿದ್ದಾರೆ.

- ಚನ್ನಗಿರಿ ಸರ್ಕಾರಿ ನೌಕರರ ಭವನದಲ್ಲಿ ಅರಣ್ಯ-ವನ್ಯಜೀವಿಗಳ ಕುರಿತು ಚಿತ್ರಕಲಾ ಸ್ಪರ್ಧೆ । ವಿಜೇತರಿಗೆ ಬಹುಮಾನ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪರಿಸರ ಮತ್ತು ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವಂತಹ ಮನೋಭಾವನೆಗಳು ವಿದ್ಯಾರ್ಥಿಗಳಲ್ಲಿ ಮೂಡಲಿ ಎಂಬ ಉದ್ದೇಶದಿಂದ ಕನ್ನಡಪ್ರಭ ದಿನಪತ್ರಿಕೆ ನಡೆಸುತ್ತಿರುವ ಕರ್ನಾಟಕ ಅರಣ್ಯ- ವನ್ಯಜೀವಿ ಎಂಬ ವಿಷಯ ಕುರಿತ ಚಿತ್ರಕಲೆ ಸ್ಪರ್ಧೆ ಪರಿಸರ ಕಾಳಜಿ ಮೂಡಿಸಲು ಸಹಕಾರಿಯಾಗಿದೆ. ಇಂತಹ ಸ್ಪರ್ಧಾ ಕಾರ್ಯಕ್ರಮ ಕನ್ನಡಪ್ರಭ ಹೊಂದಿರುವ ಪರಸರ ಕಾಳಜಿಯನ್ನು ತೋರುತ್ತದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್.ಗಣೇಶ್ ಹೇಳಿದರು.

ಶುಕ್ರವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯದ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ನಡೆಸಿದ ಚಿತ್ರಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಪರಿಸರದಲ್ಲಿ ಏನಾದರೂ ಏರು-ಪೇರುಗಳಾದಾಗ ಜನಜೀವನ ಅಸ್ತವ್ಯಸ್ತ ಆಗಲಿದೆ. ಆದರೆ, ಅರಣ್ಯ ಸಂಪತ್ತು ಇದ್ದರೆ ಕಾಲಮಾನಕ್ಕೆ ತಕ್ಕಂತೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಗಳು ಬರಲಿವೆ. ಅರಣ್ಯ ಮತ್ತು ವನ್ಯಜೀವಿಗಳು ನಮ್ಮ ದೇಶದ ಸಂಪತ್ತುಗಳಾಗಿವೆ. ವನ್ಯಜೀವಿಗಳು, ಅರಣ್ಯ ಸಂಪತ್ತನ್ನು ಪ್ರೀತಿಸೋಣ, ರಕ್ಷಿಸೋಣ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಎಸ್.ಶಂಕರಪ್ಪ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಮನುಷ್ಯನ ದುರಾಸೆಯಿಂದ ಅಮೂಲ್ಯ ಕಾಡು ಕ್ಷೀಣಿಸುತ್ತಿದೆ. ಕಾಡಿನಲ್ಲಿ ವಾಸಮಾಡುವ ಪ್ರಾಣಿಗಳು ಆಹಾರ, ನೀರನ್ನು ಅರಸಿಕೊಂಡು ನಾಡಿಗೆ ಬರುತ್ತಿವೆ ಪ್ರಾಣಿಗಳ ಸ್ಥಳವನ್ನು ಆಕ್ರಮಿಸಿಕೊಂಡಿರುವ ಮನುಷ್ಯರು ಇನ್ನಾದರೂ ಕಾಡನ್ನು ಬೆಳೆಸಲು ಮುಂದಾಗಬೇಕು. ಚಿತ್ರಕಲಾ ಸ್ಪರ್ಧೆ ನಡೆಸುವ ಮೂಲಕ ಪರಿಸರ ಸಾಮಾಜಿಕ ಕಳಕಳಿಯನ್ನು ಕನ್ನಡಪ್ರಭ ಬಳಗ ಹೊಂದಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಅರಿವು ಮೂಡಿಸುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ಕನ್ನಡಪ್ರಭ ವರದಿಗಾರ ಬಾ.ರಾ.ಮಹೇಶ್ ಸಮಾರಂಭದಲ್ಲಿ ಮಾತನಾಡಿ, ತಾಲೂಕುಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು. ಈ ಸ್ಪರ್ಧೆಯಲ್ಲೂ ಆಯ್ಕೆಯಾದವರು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದರು.

ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಮಾಡಲು ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ ಪಟ್ಟಣದ ವಿವಿಧ ಪ್ರೌಢಶಾಲೆಗಳಿಂದ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಚಿತ್ರಕಲಾ ಶಿಕ್ಷಕ ಪುಂಡಲೀಕ್ ಪಾಲ್ಗೊಂಡಿದ್ದರು.

ಚಿತ್ರಕಲಾ ಶಿಕ್ಷಕ ಪುಂಡಲೀಕ, ಶಿಕ್ಷಕರಾದ ಉಮೇಶ್, ಸಂಪನ್ಮೂಲ ಶಿಕ್ಷಕರಾದ ಪ್ರಭಾಕರ್, ಪ್ರಭು, ಸರ್ಕಾರಿ ಬಾಲಿಕಾ ಪ್ರೌಢಶಾಲೆ ಶಿಕ್ಷಕಿ ಹೇಮಾವತಿ, ತರಳಬಾಳು ಶಾಲೆಯ ಶಿಕ್ಷಕಿ ಪ್ರತಿಮಾ, ಕನ್ನಡಪ್ರಭದ ಚನ್ನಗಿರಿ ತಾಲೂಕು ವರದಿಗಾರ ಬಾ.ರಾ.ಮಹೇಶ್, ಪ್ರಸಾರರಂಗ ವಿಭಾಗದ ಶಿವರಾಜ್, ವಿದ್ಯಾರ್ಥಿಗಳು ಹಾಜರಿದ್ದರು.

- - -

(ಬಾಕ್ಸ್‌-1)* ವಿಜೇತರ ವಿವರ:

ಸರ್ಕಾರಿ ಬಾಲಿಕಾ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಕೆ.ಟಿ.ಜಾನವಿ- ಪ್ರಥಮ, ಅಜ್ಜಿಹಳ್ಳಿ ಶ್ರೀ ತರಳಬಾಳು ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಎಸ್.ಕೆ.ಡಿಂಪು- ದ್ವಿತೀಯ, ಸರ್ಕಾರಿ ಬಾಲಿಕಾ ಪ್ರೌಢಶಾಲೆ 10ನೇ ತರಗತಿಯ ನಜ್ ಜೀನ್ ಬಾನು-ತೃತೀಯ ಬಹುಮಾನ ಪಡೆದರು. ಸಮಾಧಾನಕರ ಬಹುಮಾನವಾಗಿ ಮಣ್ಣಮ್ಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸೌಭಾಗ್ಯ, ಮಿಲ್ಲತ್ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸೂಫಿಯಾನ್ ಪಡೆದರು.

- - -

-12ಕೆಸಿಎನ್‌ಜಿ1:

ಚನ್ನಗಿರಿಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್.ಗಣೇಶ್, ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಎಸ್.ಶಂಕರಪ್ಪ ಅವರು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.