ಅಭಿಲೇಖಾಲಯ ನಿರ್ವಹಣೆಯನ್ನು ಸೂಕ್ತವಾಗಿ ಮಾಡಿದಲ್ಲಿ ಇ-ಸ್ವತ್ತು ಸಂಬಂಧಿಸಿದ ದಾಖಲೆ ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ಇ-ಸ್ವತ್ತು ನೀಡಲು ಹಾಗೂ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ

ಕನ್ನಡಪ್ರಭ ವಾರ್ತೆ ಮಂಡ್ಯ

ಜಲಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು ಕಾರ್ಯಕ್ರಮಗಳಡಿ ಉತ್ತಮ ಪ್ರಗತಿ ಸಾಧಿಸಿದ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಜಿಪಂ ಸಿಇಒ ಕೆ.ಆರ್‌.ನಂದಿನಿ ಅಭಿನಂದಿಸಿದರು.

ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಅಭಿನಂದಿಸಿ ಪ್ರಶಂಸಾ ಪತ್ರ ವಿತರಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಹಾಗೂ ಕಳಪೆ ಪ್ರಗತಿ ಸಾಧಿಸಿದ ಪ್ರತಿ ತಾಲೂಕಿನ 5 ಪಿಡಿಒಗಳಿಗೆ ನೋಟಿಸ್ ನೀಡಿ ನಿಗಧಿತ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಲು ತಿಳಿಸಲಾಗಿದೆ ಎಂದರು.

ಡಿ.31ರೊಳಗೆ ಅಭಿಲೇಖಾಲಯ ಪ್ರಾರಂಭಿಸಿ:

ಗ್ರಾಪಂ ಕಡತಗಳು ಹಾಗೂ ಇ-ಸ್ವತ್ತು ಕಡತಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೆ ಈಗಾಗಲೇ ಸೂಚಿಸಲಾಗಿದ್ದು, ಆಯಾ ತಾಪಂ ಇಒಗಳು ಈ ಬಗ್ಗೆ ನಿರಂತರ ಅನುಸರಣೆ ಮಾಡಿ ಎಷ್ಟು ಗ್ರಾಪಂಗಳಲ್ಲಿ ಅಭಿಲೇಖಾಲಯ ಸುವ್ಯವಸ್ಥಿತವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಡಿಸೆಂಬರ್ 31ರೊಳಗೆ ಅಭಿಲೇಖಾಲಯ ಪ್ರಾರಂಭಿಸಿ, ಕ್ಯಾಟಲಾಗ್ ಇಂಡೆಕ್ಸ್ ಮಾಡಿ 2026ರ ಹೊಸ ವರ್ಷವನ್ನು ಹೊಸ ಸುಸಜ್ಜಿತ ಅಭಿಲೇಖಾಲಯದೊಂದಿಗೆ ಪ್ರಾರಂಭಿಸಬೇಕು ಎಂದು ಸೂಚಿಸಿದರು.

ಅಭಿಲೇಖಾಲಯ ನಿರ್ವಹಣೆಯನ್ನು ಸೂಕ್ತವಾಗಿ ಮಾಡಿದಲ್ಲಿ ಇ-ಸ್ವತ್ತು ಸಂಬಂಧಿಸಿದ ದಾಖಲೆ ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ಇ-ಸ್ವತ್ತು ನೀಡಲು ಹಾಗೂ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.

ಕುಂದುಕೊರತೆ ಸಭೆ ಆಯೋಜಿಸಬೇಕು:

ಗ್ರಾಪಂ ಮತ್ತು ತಾಪಂ ಕಚೇರಿಗಳಲ್ಲಿ ಪ್ರತಿ ಸೋಮವಾರ ಕಡ್ಡಾಯವಾಗಿ ಸಾರ್ವಜನಿಕ ಕುಂದು ಕೊರತೆ ಸಭೆ ಆಯೋಜಿಸಬೇಕು. ಈವರೆಗೆ ಜಿಪಂ ಕಚೇರಿಗೆ ಸ್ವೀಕೃತವಾಗಿರುವ ದೂರು ಮತ್ತು ಮನವಿಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಅನುಪಾಲನಾ ವರದಿಯನ್ನು ಜಿಪಂ ಕಚೇರಿಗೆ ಸಲ್ಲಿಸಬೇಕು ಎಂದರು.

ಜಿಪಂ ಕಚೇರಿಗೆ ಸಾರ್ವಜನಿಕ ಸೋಮವಾರದಂದು ಸ್ವೀಕೃತವಾಗಿರುವ ದೂರು ಮತ್ತು ಮನವಿಗಳ ಕುರಿತು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಇನ್ನು ಮುಂದೆ ಪ್ರತಿ ಸೋಮವಾರ ಸಿಇಒರವರ ನೇತೃತ್ವದ ಅಧಿಕಾರಿಗಳ ತಂಡ ತಾಪಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಅಗತ್ಯ ಮಾಹಿತಿಗಳೊಂದಿಗೆ ಸಿದ್ದವಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆ.ಆರ್.ಪೇಟೆ, ಪಾಂಡವಪುರ ಇಒಗಳಿಗೆ ಪ್ರಶಂಸಾ ಪತ್ರ:

ಕೃಷ್ಣರಾಜಪೇಟೆ ತಾಲೂಕಿನ ಎಲ್ಲಾ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಕೊಳವೆ ಬಾವಿಗಳಿಗೆ ಶೇ.100 ರಷ್ಟು ರಕ್ಷಣಾ ಕಾಮಗಾರಿ ನಿರ್ಮಾಣ ಮಾಡಿದ್ದರಿಂದ, ಗ್ರಾಪಂಗಳ ಪರವಾಗಿ ಕೃಷ್ಣರಾಜಪೇಟೆ ತಾಪಂ ಇಒ ಕೆ.ಸುಷ್ಮಾ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ತೆರಿಗೆ ವಸೂಲಾತಿಯಲ್ಲಿ ಪಾಂಡವಪುರ ತಾಲೂಕಿನ 24 ಗ್ರಾಪಂಗಳು ಪ್ರಸಕ್ತ ಸಾಲಿನ ಬೇಡಿಕೆಗೆ ಅನುಗುಣವಾಗಿ ರು. 4.09 ಕೋಟಿ ತೆರಿಗೆ ವಸೂಲಾತಿ ಮಾಡಿ ಶೇಕಡ 83.56 ಪ್ರಗತಿ ಸಾಧಿಸಿದ್ದರಿಂದ ಗ್ರಾಪಂಗಳ ಪರವಾಗಿ ಪಾಂಡವಪುರ ತಾಪಂ ಇಒ ವೀಣಾ ಅವರಿಗೆ ಪ್ರಶಂಸಾ ಪತ್ರ ನೀಡಲಾಯಿತು.

ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ, ಯೋಜನಾ ನಿರ್ದೇಶಕರಾದ ರೂಪಶ್ರೀ ಕೆ.ಎನ್, ಸಹಾಯಕ ಕಾರ್ಯದರ್ಶಿ (ಆಡಳಿತ) ರವೀಂದ್ರ, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ ಸೇರಿದಂತೆ ಜಿಲ್ಲೆಯ ಎಲ್ಲಾ ತಾಪಂ ಇಒ, ಆಯ್ದ ಪಿಡಿಒಗಳು ಹಾಜರಿದ್ದರು.