ಸಾರಾಂಶ
ಶಿವಕುಮಾರ ಕುಷ್ಟಗಿಗದಗ: ಜಿಲ್ಲೆಯ ರೋಣ ಪುರಸಭೆ ವ್ಯಾಪ್ತಿಯಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ಯಾನಭೋಗರ ಕೆರೆಯ ದಡದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ವಾಣಿಜ್ಯ ಮಳಿಗೆ ಮತ್ತು ಇನ್ನುಳಿದ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸುವಂತೆ ಹೊರಡಿಸಿದ ಗದಗ ಜಿಲ್ಲಾಧಿಕಾರಿ ಆದೇಶಕ್ಕೆ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ತಿಂಗಳು ಗತಿಸುತ್ತ ಬಂದರೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
ರೋಣ ಪುರಸಭೆಯ ವ್ಯಾಪ್ತಿಯಲ್ಲಿನ ಪಟ್ಟಣದ ಹೃದಯ ಭಾಗದಲ್ಲಿ 13.38 ಎಕರೆ ಪ್ರದೇಶದಲ್ಲಿ ಈ ಹಿಂದೆ ಕುಡಿಯುವ ನೀರಿಗಾಗಿ ಬೃಹತ್ ಕೆರೆಯನ್ನು ನಿರ್ಮಿಸಲಾಗಿತ್ತು. ಆದರೆ ಕೆರೆಯನ್ನು ಉಳಿಸಿ ಬೆಳೆಸಬೇಕಾದ ಪುರಸಭೆಯ ಅಧಿಕಾರಿಗಳು ಹಾಗೂ ಕೆಲವು ಪ್ರಭಾವಿಗಳು ಸೇರಿಕೊಂಡು 7 ಎಕರೆಗೂ ಅಧಿಕ ಜಾಗ ಒತ್ತುವರಿ ಮಾಡಿಕೊಂಡಿದ್ದು, ಸದ್ಯಕ್ಕೆ 6 ಎಕರೆ ಮಾತ್ರ ಕೆರೆ ಉಳಿದಿದೆ.ಇದನ್ನು ಮನಗಂಡ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧಿನಿಯಮ 2014ರ ಅಡಿಯಲ್ಲಿ ಈ ಅತಿಕ್ರಮಣ ತೆರವಿಗೆ ತಕ್ಷಣ ಕ್ರಮ ಕೈಕೊಳ್ಳುವಂತೆ ಮೂರುಬಾರಿ ( ಜೂ. 6, 13, 27) ಸ್ಪಷ್ಟವಾದ ಆದೇಶಗಳನ್ನು ನೀಡಿತ್ತು. ಅದರನ್ವಯ ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಕೋಶಕ್ಕೆ ಆದೇಶ ಮಾಡಿದ್ದರು. ಕೋಶದ ಅಧಿಕಾರಿಗಳು ಈ ವರೆಗೆ ಜಿಲ್ಲಾಧಿಕಾರಿ ಆದೇಶವನ್ನು ಕಣ್ಣೆತ್ತಿಯೂ ನೋಡಿದಂತಿಲ್ಲ.
ಕೆರೆ ರಕ್ಷಣಗೆ ಸ್ಥಳೀಯರು: ರೋಣ ಪಟ್ಟಣದಲ್ಲಿರುವ ಶ್ಯಾನುಭೋಗರ ಕೆರೆ ದೀರ್ಘಕಾಲದಿಂದ ಒತ್ತುವರಿ ಸಮಸ್ಯೆಯನ್ನು ಎದುರಿಸುತ್ತಿದೆ. ಕೆರೆಯ ದಡದಲ್ಲಿ ಅನಧಿಕೃತವಾಗಿ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿದ್ದು, ಈ ಬಗ್ಗೆ ಸ್ಥಳೀಯ ಸಾರ್ವಜನಿಕರು ಮತ್ತು ಪರಿಸರ ಹೋರಾಟಗಾರರು ಸರ್ಕಾರಕ್ಕೆ ನಿರಂತರವಾಗಿ ದೂರು ಸಲ್ಲಿಸುತ್ತ ಬಂದಿದ್ದಾರೆ.ಪ್ರಾಧಿಕಾರ ಮತ್ತು ಉಚ್ಚ ನ್ಯಾಯಾಲಯದ ಆದೇಶಗಳು ಮತ್ತು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಅಧಿನಿಯಮ 2014ರ ಅಡಿಯಲ್ಲಿ, ಅಕ್ರಮ ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಗದಗ ಜಿಲ್ಲಾಧಿಕಾರಿಗೆ ಪತ್ರ ಮುಖೇನ ಸೂಚಿಸಿದ್ದವು. ಈ ಆದೇಶವನ್ನು ಅನುಸರಿಸಿ, ಗದಗ ಜಿಲ್ಲಾಧಿಕಾರಿ 15-7-2025ರಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದು, ಶ್ಯಾನಭೋಗರ ಕೆರೆಯ ದಡದಲ್ಲಿನ ಎಲ್ಲ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ತಕ್ಷಣವೇ ತೆರವುಗೊಳಿಸಲು ಸೂಚಿಸಿದ್ದಾರೆ. ಅಲ್ಲದೆ, ಈ ಕಾರ್ಯಾಚರಣೆಯ ಕುರಿತು ವರದಿಯನ್ನು ಸಂಬಂಧಿತ ಪ್ರಾಧಿಕಾರಗಳಿಗೆ ಮತ್ತು ಅರ್ಜಿದಾರರಿಗೆ ಸಲ್ಲಿಸುವಂತೆ ನಿರ್ದೇಶಿಸಿದ್ದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ರೋಣದ ಶ್ಯಾನಭೋಗರ ಕೆರೆಯು ತನ್ನ ಮೂಲ ಸ್ವರೂಪವನ್ನು ಮರಳಿ ಪಡೆಯಬೇಕು. ಆದರೆ ಕೆರೆಯ ಅಕ್ರಮ ಒತ್ತುವರಿಯನ್ನು ತೆರವು ಮಾಡಬಾರದು ಎಂದು ಅಧಿಕಾರಿಗಳ ಮೇಲೆ ಪ್ರಭಾವಿ ರಾಜಕಾರಣಿಗಳು ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ನ್ಯಾಯಾಲಯ ತಕ್ಷಣವೇ ತನಿಖೆ ನಡೆಸಬೇಕು. ಜಿಲ್ಲಾಧಿಕಾರಿ ಕೇವಲ ಪತ್ರ ಬರೆದರೆ ಸಾಕಾಗದು. ಈ ಕುರಿತು ಏನು ಕ್ರಮ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಮಲ್ಲಯ್ಯ ಹಿರೇಮಠ ಹೇಳಿದರು.