ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ನಗರದ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿರುವ ರೈಲ್ವೆ ಗೇಟ್ ನಂ. 63ರಲ್ಲಿ ಸೇತುವೆ ಹತ್ತು ವರ್ಷದ ಬಳಿಕ 2024ರ ಫೆಬ್ರುವರಿಯಲ್ಲಿ ಪೂರ್ಣಗೊಂಡಿದ್ದರೂ ಈ ವರೆಗೂ ಸಂಚಾರಕ್ಕೆ ಮುಕ್ತವಾಗಿಲ್ಲ. ಮುಕ್ತವಾಗುವ ಸಾಧ್ಯತೆಯೂ ಸದ್ಯಕ್ಕಿಲ್ಲ.ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಶೇ. 50ರ ಅನುದಾನದಡಿ ಸೇತುವೆ ನಿರ್ಮಿಸಲಾಗಿದೆ. ಆದರೆ, ಯೋಜನೆ ರೂಪಿಸುವ ವೇಳೆ ಲಿಂಕ್ ರಸ್ತೆಯ ನಿರ್ಮಾಣದ ಪ್ರಸ್ತಾವನೆಯನ್ನೇ ಮಾಡಿಲ್ಲ. ಹೀಗಾಗಿ ಸೇತುವೆ ಮಾತ್ರ ನಿರ್ಮಿಸಲಾಗಿದೆ. ಲಿಂಕ್ ರಸ್ತೆ ನಿರ್ಮಾಣಕ್ಕೆ ಯಾರು ಅನುದಾನ ನೀಡಬೇಕೆಂಬುದು ಯಕ್ಷಪ್ರಶ್ನೆಯಾಗಿದೆ. ರೈಲ್ವೆ ಇಲಾಖೆ ನಾವು ಸೇತುವೆ ನಿರ್ಮಿಸಿದ್ದು ರಸ್ತೆ ನಿರ್ಮಿಸುವುದಿಲ್ಲ, ರಾಜ್ಯ ಸರ್ಕಾರವೇ ಇದಕ್ಕೆ ಅನುದಾನ ನೀಡಬೇಕೆಂದು ಹೇಳಿದರೆ, ರಾಜ್ಯ ಸರ್ಕಾರ ಈಗಾಗಲೇ ನಾವು ಶೇ. 50ರಷ್ಟು ಅನುದಾನ ನೀಡಿದ್ದು ಲಿಂಕ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವುದಿಲ್ಲವೆಂದು ಕೈಚೆಲ್ಲಿದೆ. ಹೀಗಾಗಿ ಸೇತುವೆ ಮೇಲಿನ ಸಂಚಾರ ಮುಕ್ತಗೊಳಿಸುವುದು ವಿಳಂಬವಾಗಿದೆ.
ಪ್ರಸ್ತಾವನೆ ಕಳಿಸಿಕೊಡಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಲಿಂಕ್ ರಸ್ತೆ ನಿರ್ಮಿಸಿ ಸೇತುವೆ ಮುಕ್ತಗೊಳಿಸಬೇಕೆಂದು ತಾಕೀತು ಮಾಡಿದ್ದರು. ಆದರೆ, ಅಧಿಕಾರಿಗಳು, ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಪುನಃ ಅನುದಾನ ನೀಡಲು ಬರುವುದಿಲ್ಲ. ಹೀಗಾಗಿ ಜಿಲ್ಲಾಡಳಿತದಿಂದ ಪುನಃ ಪ್ರಸ್ತಾವನೆ ಸಲ್ಲಿಸಿ, ಅದನ್ನು ಕೇಂದ್ರ ರೈಲ್ವೆ ಇಲಾಖೆಗೆ ಕಳುಹಿಸಿಕೊಡುತ್ತೇವೆ. ಅಲ್ಲಿಂದ ಮಂಜೂರಾತಿಯಾದರೆ ಲಿಂಕ್ ರಸ್ತೆ ನಿರ್ಮಾಣಕ್ಕೆ ಪೂರಕವಾಗಿ ಭೂ ಸ್ವಾಧೀನ ಮತ್ತು ರಸ್ತೆ ನಿರ್ಮಾಣ ಕುರಿತು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.ಈ ಹಿಂದೆ ಸೇತುವೆ ನಿರ್ಮಾಣದ ವೇಳೆ ಲಿಂಕ್ ರಸ್ತೆ ನಿರ್ಮಾಣ ಮತ್ತು ಭೂ ಸ್ವಾಧೀನ ಪ್ರಕ್ರಿಯೆಗೆ ಕೇವಲ ₹ 1.86 ಕೋಟಿ ಅಂದಾಜು ಮಾಡಲಾಗಿತ್ತು. ಆಗ ಆಗಲಿಲ್ಲ. 2024ರಲ್ಲಿ ಸೇತುವ ಪೂರ್ಣಗೊಳಿಸುವ ವೇಳೆಯಲ್ಲಿ ₹ 4.26 ಕೋಟಿ ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ₹ 5.26 ಕೋಟಿ ತಗಲುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ನೈಋತ್ಯ ರೈಲ್ವೆ ಇಲಾಖೆಗೆ ಕಳುಹಿಸಿದ ಮೇಲೆ, ಕೇಂದ್ರದಿಂದ ಅನುಮತಿ ದೊರೆಯಬೇಕಾಗಿದೆ. ಇದೆಲ್ಲವೂ ಸುಲಭ ಸಾಧ್ಯವೇ ಎನ್ನುವುದು ಮಾತ್ರ ಪ್ರಶ್ನಾರ್ಥಕ.
ಈ ಬಾರಿ ನಾವು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸೇತುವೆ ನಿರ್ಮಾಣವಾದರೂ ಸಂಚಾರಕ್ಕೆ ಮುಕ್ತವಾಗಿಲ್ಲ. ಹೀಗಾಗಿ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಹೋರಾಟ ಸಮಿತಿ ಸಂಚಾಲಕ ಭಾರಧ್ವಜ ನಾಯಕ ಹೇಳಿದರು.ಸೇತುವೆ ನಿರ್ಮಿಸುವ ವೇಳೆ ಲಿಂಕ್ ರಸ್ತೆ ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿಲ್ಲ. ರಾಜ್ಯ ಸರ್ಕಾರ ಶೇ. 50ರಷ್ಟು ಅನುದಾನ ನೀಡಿದ್ದರಿಂದ ಮತ್ತೆ ನೀಡುವುದಿಲ್ಲ ಎಂದಿದೆ. ಹೀಗಾಗಿ, ಕೇಂದ್ರಕ್ಕೆ ಪುನಃ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.