ಸಾರಾಂಶ
ಸ್ನೇಹ ಕೌಸ್ತುಭ ಶೈಕ್ಷಣಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವಲಿಂಗಪ್ಪ
ಕನ್ನಡಪ್ರಭ ವಾರ್ತೆ ಸಿರುಗುಪ್ಪವಿದ್ಯಾರ್ಥಿ ಜೀವನದಲ್ಲಿ ಪದ ವಿಪೂರ್ವ ಶಿಕ್ಷಣ ಅತ್ಯಂತ ನಿರ್ಣಾಯಕ ಘಟ್ಟವಾಗಿದ್ದು, ಸ್ನೇಹ-ಸಂಭ್ರಮಗಳ ನಡುವೆ ಭವಿಷ್ಯದ ಬಗ್ಗೆ ಎಚ್ಚರವಾಗಿರಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೆ. ಶಿವಲಿಂಗಪ್ಪ ಹಂದಿಹಾಳು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಸ್ನೇಹ ಕೌಸ್ತುಭ ಶೈಕ್ಷಣಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿ ಲೈಫ್ ಗೋಲ್ಡನ್ ಲೈಫ್ ಎಂಬ ಮಾತಿದೆ. ಹಾಗೆಂದರೆ ಬಂಗಾರದಂತಹ ಜೀವನ ರೂಪಿಸಿಕೊಳ್ಳಲು ಇರುವ ದೊಡ್ಡ ಅವಕಾಶವಾಗಿದೆ. ಭವಿಷ್ಯ ಕಟ್ಟಿಕೊಳ್ಳಲು ವಿದ್ಯಾರ್ಥಿ ಜೀವನ ಹೆಚ್ಚು ಮಹತ್ವದ್ದು ಎಂದು ಹೇಳಲಾಗಿದೆಯೇ ಹೊರತು, ಬೇರೆ ಅರ್ಥದಿಂದಲ್ಲ. ಇದನ್ನು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಸ್ನೇಹ, ಸಂತೋಷ, ಸಂಭ್ರಮಗಳ ನಡುವೆಯೇ ಭವಿಷ್ಯದ ಬಗ್ಗೆ ಎಚ್ಚರ ಇರಬೇಕು. ಉದ್ಯೋಗ ಎಂದರೆ ಬರೀ ಸರ್ಕಾರಿ ಉದ್ಯೋಗ ಎಂದೂ ಭಾವಿಸಬಾರದು. ವಿದ್ಯಾರ್ಥಿಗಳು ತಮಗಿಷ್ಟದ ಖಾಸಗಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು. ಉದ್ಯೋಗ ಮಾಡುವುದಕ್ಕಿಂತ ಉದ್ಯೋಗ ನೀಡುವಂತಹ ದೊಡ್ಡ ಉದ್ಯಮಿಯಾಗಿ ಬೆಳೆಯಬೇಕು. ಅನೇಕ ಸಾಧಕರ ಓದಿನ ಹಿನ್ನಲೆ ನೋಡಿದರೆ ಕಡಿಮೆ ಓದಿದವರು ದೊಡ್ಡ ಸಾಧನೆ ಮಾಡಿದವರಿದ್ದಾರೆ. ಕೆಲವರು ಉನ್ನತ ಶಿಕ್ಷಣದ ಪಡೆದೂ ಬೇರೆ ಕ್ಷೇತ್ರದಲ್ಲಿ ಕ್ರೀಡೆ, ಸಾಹಿತ್ಯ, ಸಂಗೀತ ಇತರ ಸಾಧನೆ ಮಾಡಿದವರಿದ್ದಾರೆ. ಹೀಗಾಗಿ ನೀವು ಏನಾಗಬೇಕು ಎಂಬುದನ್ನೇ ನೀವೇ ನಿರ್ಧರಿಸಬೇಕು. ಗುರಿ ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಕ್ರಮಿಸಬೇಕು. ಬರೀ ಕನಸು ಕಾಣುವುದರಿಂದ ಯಾವ ಲಾಭವೂ ಇಲ್ಲ. ಕನಸು ಬೆನ್ನತ್ತಿ ಹೊರಡಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಎಚ್. ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ಸದಾಶಿವಪ್ಪ, ಉಪನ್ಯಾಸಕ ಪಂಪಾಪತಿ, ಪೊಲೀಸ್ ಚಿನ್ನಪ್ಪ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.