ಸಾರಾಂಶ
ಹುಬ್ಬಳ್ಳಿ: ಕಲಬುರ್ಗಿ ಜಿಲ್ಲೆಯ ಕೋಟನೂರು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದವರನ್ನು ರಾಜ್ಯದಿಂದ ಗಡಿಪಾರು ಮಾಡಲು ಒತ್ತಾಯಿಸಿ ಬುಧವಾರ ಕರ್ನಾಟಕ ದಲಿತ ವಿಮೋಚನಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ಪ್ರತಿಮೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿ ಕಾರ್ಯಕರ್ತರು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ದಲಿತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಆಡಳಿತ ವ್ಯವಸ್ಥೆ, ಇದೀಗ ಅಂಬೇಡ್ಕರ್ ಪುತ್ಥಳಿಗೆ ರಕ್ಷಣೆ ನೀಡುವಲ್ಲೂ ನಿರ್ಲಕ್ಷ್ಯ ತೋರುತ್ತಿದೆ. ಅಂಬೇಡ್ಕರ್‌ಗೆ ಅಪಮಾನ ಮಾಡಿದರೆ, ದಲಿತರ ಮೇಲೆ ದೌರ್ಜನ್ಯ ನಡೆದರೆ ಜಿಲ್ಲಾಡಳಿತವೇ ಹೊಣೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರೇ ತಿಳಿಸಿದ್ದಾರೆ. ಆದರೂ, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಿರ್ಲಕ್ಷ್ಯ ವಹಿಸಿದ ಕಲಬುರ್ಗಿ ಜಿಲ್ಲಾಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಇನ್ಮುಂದೆ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಾರ್ಥ್ ಮಲ್ಲಮ್ಮನವರ, ಕೆಂಚಪ್ಪ ಮಲ್ಲಮ್ಮನವರ, ಉಮೇಶ ಮಾದರ, ರಮೇಶ ಮಾದರ, ಸುರೇಶ ಶಿವಣ್ಣವರ, ಶ್ರೀಧರ ಕಂದಗಲ್, ಅಕ್ಷಯ, ನರೇಶ, ವಿಶ್ವನಾಥ ಬಳ್ಳಾರಿ, ಅನೀಲ ಗೋನಾಳ, ಅಶೋಕ ಮಾದಾರ, ಶಾಂತರಾಜ ಬಿ.ಟಿ, ರವಿ ಹೊಸಮನಿ ಸೇರಿದಂತೆ ಹಲವರಿದ್ದರು.