ವಿಘ್ನೇಶ್ ಎಂ. ಭೂತನಕಾಡು, ಮಡಿಕೇರಿಪ್ರವಾಸಿ ತಾಣವಾಗಿರುವ ಮಂಜಿನ ನಗರಿಯಲ್ಲಿ ಮಡಿಕೇರಿಯಲ್ಲಿ ಹಲವು ಆಕರ್ಷಣೀಯ ತಾಣಗಳಿದೆ. ರಾಜಾಸೀಟ್. ನಗರದ ಹೃದಯ ಭಾಗದಲ್ಲಿ ಎತ್ತರದ ಪ್ರದೇಶದಲ್ಲಿರುವ ಈ ಸುಂದರ ತಾಣ ಉದ್ಯಾನವನದಿಂದ ಕೂಡಿದ್ದು, ಆಕರ್ಷಣೀಯವಾಗಿದೆ.
ಇಲ್ಲೊಂದು ಮಂಟಪವಿದ್ದು, ಹಿಂದೆ ಕೊಡಗಿನ ರಾಜ - ರಾಣಿಯರು ಈ ಮಂಟಪದಲ್ಲಿ ಕುಳಿತು ಪ್ರಕೃತಿಯ ಸೌಂದರ್ಯ ಅಹ್ಲಾದಿಸುತ್ತಾ ಕಾಲ ಕಳೆಯುವ ತಾಣವಾದ್ದರಿಂದ ಇದಕ್ಕೆ ರಾಜಾಸೀಟ್ ಎಂಬ ಹೆಸರು ಬಂದಿದೆ. ಮುಂಜಾನೆಯ ಸೂರ್ಯೋದಯದಲ್ಲಿ ಇಲ್ಲಿನ ವಾಯುವಿಹಾರ ಅಹ್ಲಾದಕರ. ಸಂಜೆಯ ಸೂಯಾಸ್ತಮವಂತೂ ಮನಸ್ಸಿಗೆ ಮುದ ನೀಡುತ್ತದೆ.ಮಡಿಕೇರಿಯ ಹೃದಯಭಾಗದಲ್ಲಿರುವ ರಾಜರ ಅರಮನೆ ಹೊಂದಿರುವ ಕೋಟೆ ಮಡಿಕೇರಿಯ ಮತ್ತೊಂದು ಪ್ರಮುಖ ಆಕರ್ಷಣೆ. ಈ ಅರಮನೆ ಪಕ್ಕದಲ್ಲೇ ಎರಡು ಕಲ್ಲಿನ ಬೃಹತ್ ಆನೆಗಳಿದ್ದು, ಆನೆಗಳು ನೋಡುಗರ ಗಮನ ಸೆಳೆಯುತ್ತದೆ. ವಾರಾಂತ್ಯಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಮಡಿಕೇರಿ ಕೋಟೆ ಆವರಣದಲ್ಲಿ ಪ್ರಾಚೀನ ವಸ್ತು ಸಂಗ್ರಹಾಲಯವೊಂದಿದೆ. ಕ್ರಿ.ಶ. 1855 ಬ್ರಿಟಿಷ್ ಆಡಳಿತವಿದ್ದ ಸಂದರ್ಭ ರೆ.ಎ. ಫೆನೆಟ್ ಎಂಬ ಪಾದ್ರಿಯು ಸರ್ಕಾರದ ನೆರವಿನಿಂದ ಆ್ಯಂಗ್ಲಿಕನ್ ಚರ್ಚ್ ನಿರ್ಮಿಸಿದರು.
ಮಡಿಕೇರಿಯ ಮಹದೇವಪೇಟೆ ಬಳಿಯ ಎತ್ತರದ ಗುಡ್ಡದಲ್ಲಿ ರಾಜರ ಗದ್ದುಗೆಗಳಿವೆ. ವೀರರಾಜೇಂದ್ರ ಹಾಗೂ ಆತನ ಪತ್ನಿ ಮತ್ತು ಲಿಂಗರಾಜೇಂದ್ರನ ಗದ್ದುಗೆಗಳು ಇಲ್ಲಿವೆ. ಇದನ್ನು ಕ್ರಿ.ಶ. 1820ರಲ್ಲಿ ಲಿಂಗರಾಜೇಂದ್ರರ ಪುತ್ರ ಚಿಕ್ಕ ವೀರರಾಜ ಕಟ್ಟಿಸಿದರು. ಈ ಗದ್ದುಗೆಗಳು ಕೂಡಾ ಇಂಡೋ ಸಾರ್ಸನಿಕ್ ಶೈಲಿಯಲ್ಲಿದೆ. ವೀರ ಸೇನಾನಿ ಜನರಲ್ ತಿಮ್ಮಯ್ಯ ಹುಟ್ಟಿದ ಮನೆ ಸನ್ನಿಸೈಡ್ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಪ್ರವಾಸಿಗರ ನೆಚ್ಚಿನ ತಾಣ ಮಡಿಕೇರಿಯ ರಾಜಾಸೀಟು ಬಳಿಯಲ್ಲಿ ಕೂರ್ಗ್ ವಿಲೇಜ್ ತಾಣವಿದೆ.1957ರಲ್ಲಿ ಮಡಿಕೇರಿಗೆ ಭೇಟಿ ನೀಡಿದ ಅಂದಿನ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ಅವರು ಕೊಡಗಿನ ದೃಶ್ಯವೈಭೋಗಕ್ಕೆ ನಿಜಕ್ಕೂ ಮನ ಸೋತಿದ್ದರು. ನೆಹರು ಭೇಟಿಯ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ಮಡಿಕೇರಿಯ ಆಕಾಶವಾಣಿ ಬಳಿ ಮಂಟಪವನ್ನು ನಿರ್ಮಿಸಿ ನೆಹರು ಮಂಟಪ ಎಂದು ಹೆಸರಿಟ್ಟರು.ಇದಲ್ಲದೆ ಕೊಡಗಿನಲ್ಲಿ ಕಾವೇರಿ ನಿಸರ್ಗ ಧಾಮ, ಹಾರಂಗಿ ಜಲಾಶಯ, ದುಬಾರೆ ಸಾಕಾನೆ ಶಿಬಿರ, ಚಿಕ್ಲಿಹೊಳೆ ಜಲಾಶಯ, ಹೊನ್ನಮ್ಮನ ಕೆರೆ ಸೇರಿದಂತೆ ಅಬ್ಬಿಜಲಪಾತ, ಮಲ್ಲಳ್ಳಿ, ಚೇಲಾವರ, ಇರ್ಪು ಸೇರಿದಂತೆ ಹಲವು ಜಲಪಾತಗಳಿವೆ. ತಡಿಯಂಡಮೋಳ್, ಕೋಟೆಬೆಟ್ಟ ಸೇರಿದಂತೆ ಹೆಚ್ಚಿನ ಬೆಟ್ಟಗಳು ಕೊಡಗಿನ ಹತ್ತು ಹಲವು ಆಕರ್ಷಣೆಗಳ ಪೈಕಿ ಮುಂಚೂಣಿಯ್ಲಿವೆ.