ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ರಪ್ತು ಯೋಗ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಸಹಕಾರ ತತ್ವದ ಆಧಾರದಲ್ಲಿ ವಿಶೇಷವಾಗಿ ಯುವ ರೈತರು ಇದರ ಪ್ರಯೋಜನ ಪಡೆದುಕೊಂಡು ಜಿಲ್ಲೆಯಿಂದ ತೆಂಗು, ದಾಳಿಂಬೆ, ಮಾವು, ಹುಣಸೆ ಮುಂತಾದ ಬೆಳೆಗಳ ಉತ್ಪನ್ನಗಳ ರಪ್ತು ಕೈಗೊಳ್ಳಬೇಕೆಂದು ಜಿ.ಪಂ. ಸಿಇಒ ಪ್ರಭು ಸಲಹೆ ನೀಡಿದರು.ಅವರು ತುಮಕೂರಿನ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆದ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಹಾಗೂ ರಪ್ತು ಕುರಿತ ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು.ತುಮಕೂರು ಜಿಲ್ಲೆಯಿಂದ ಸುಮಾರು 136 ದೇಶಗಳಿಗೆ 8 ಸಾವಿರದಿಂದ 9 ಸಾವಿರ ಕೋಟಿ ಮೌಲ್ಯದ ವಿವಿಧ ಉತ್ಪನ್ನಗಳ ರಪ್ತನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು ರಪ್ತು ಕೈಗೊಳ್ಳುವ ರೈತರನ್ನು ಮುಂಬರುವ ವರ್ಷಗಳಲ್ಲಿ ಸನ್ಮಾನಿಸಲಾಗುವುದೆಂದು ತಿಳಿಸಿದರು.ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ನಾರಾಯಣ ಗೌಡ ಮಾತನಾಡಿ ಹುಣಸೆ ಮಹತ್ವ ತಿಳಿಸಿ ರೈತರು ಮೌಲ್ಯವರ್ಧಿತ ಹುಣಸೆ ಉತ್ಪನ್ನಗಳನ್ನು ಬೆಳೆಯಬೇಕೆಂದು ಸಲಹೆ ನೀಡಿದರು.ಕೆಪೆಕ್ ನ ವ್ಯವಸ್ಥಾಪಕ ನಿರ್ದೇಶಕ ಸಿ.ಎಲ್. ಶಿವಪ್ರಕಾಶ್ ಮಾತನಾಡಿ ತುಮಕೂರಿನಲ್ಲಿ ಬೆಳೆಯುವ ಯಾವುದೇ ಬೆಳೆಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಕೈಗೊಳ್ಳಲು ಪಿ.ಎಮ್,ಎಫ್,ಎಮ್,ಇ ಯೋಜನೆಯಡಿ 15 ಲಕ್ಷ ಸಹಾಯಧನ ಲಭ್ಯವಿದ್ದು, ಬ್ಯಾಂಕ್ ಗಳ ಮುಖಾಂತರ, ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು.ತೆಂಗಿನ ಬೆಳೆಯಲ್ಲಿ ಉತ್ಪಾದಿಸಬಹುದಾದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಂಸ್ಕರಣೆ ಮತ್ತು ರಪ್ತು ಕೈಗೊಳ್ಳಲು ಎಲ್ಲಾ ಅವಶ್ಯಕ ಮಾಹಿತಿ ಮತ್ತು ನೆರವು ನೀಡುವುದಾಗಿ ತಿಳಿಸಿದರು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿಶ್ವನಾಥ್ ಎಂ. ಮಾತನಾಡಿ ಜಿಲ್ಲೆಯಲ್ಲಿ ಹುಣಸೆ ಟೆಕ್ನಾಲಜಿ ಪಾರ್ಕ್ ಮತ್ತು ತೆಂಗು ಟೆಕ್ನಾಲಜಿ ಪಾರ್ಕ್ ಪ್ರಾರಂಭವಾಗಲಿದೆ ಎಂದು ತಿಳಿಸಿದರು.ಸಭೆಯಲ್ಲಿ ಹಾಜರಿದ್ದ ತೋಟಗಾರಿಕೆ ಇಲಾಖೆ ನಿವೃತ್ತ ನಿರ್ದೇಶಕ ಡಾ. ಎಲ್ ಹನುಮಯ್ಯ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ಅವರು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು.ಕಾರ್ಯುಕ್ರಮದ ತಾಂತ್ರಿಕ ಸಮಾವೇಶದಲ್ಲಿ ಬೆಂಗಳೂರಿನ ರಪ್ತು ಸಲಹೆಗಾರರಾದ ವೀಣಾ ವೆಂಕಟೇಶ್ ಅವರು ವಿದೇಶಿ ವ್ಯಾಪಾರ ನೀತಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೊಬ್ಬ ರಪ್ತು ಸಲಹೆಗಾರರಾದ ಡಾ. ಸಿ ನಾಗವೇಣಿ ಅವರು ರಪ್ತು ಪ್ರಕ್ರಿಯೆ ಪರಿಚಯ, ರಫ್ತಿನ ವೆಚ್ಚ, ಬೆಲೆ ನಿಗದಿ ಮತ್ತು ದಾಖಲಾತಿಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ತೆಂಗಿನ ಸಂಸ್ಕರಣೆ ಬಗ್ಗೆ ತೆಂಗು ಅಭಿವೃದ್ಧಿ ಮಂಡಳಿ (ಮಾರುಕಟ್ಟೆ) ಉಪನಿರ್ದೇಶಕ ಗುರುರಾಜ್ ಮಾಹಿತಿ ನೀಡಿದರು.ಪೂಜಾ ಮತ್ತು ಡಾ. ಸುರೇಶ್, ಮಾವು ದಾಳಿಂಬೆ ಹೂಗಳು ಮತ್ತು ಸಿರಿಧಾನ್ಯ ರಫ್ತಿನ ಬಗ್ಗೆ ಮಾಹಿತಿ ನೀಡಿದರು. ರಪ್ತು ಉತ್ತೇಜನ ಕಾರ್ಯಮಕ್ರಮಗಳ ಬಗ್ಗೆ ಚಂದ್ರಕುಮಾರ್ ಎನ್ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಶಾರದಾ ಮತ್ತಿತರರು ಉಪಸ್ಥಿತರಿದ್ದರು.