ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಹ್ಯಾಕಥಾನ್ ಎಂದರೆ ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಜನರು ತಂಡಗಳಾಗಿ ಸೇರಿ ಕಡಿಮೆ ಸಮಯದಲ್ಲಿ ಕೆಲಸ ಮಾಡುವ ಸ್ಪರ್ಧಾತ್ಮಕ ಕಾರ್ಯಕ್ರಮವಾಗಿದೆ ಎಂದು ನಗರದ ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್. ಶಿವಪ್ರಸಾದ್ ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಿಷನ್ ಲರ್ನಿಂಗ್ ವಿಭಾಗದಿಂದ ಆಯೋಜಿಸಿದ್ದ ರಾಜ್ಯಮಟ್ಟದ ತಂತ್ರಜ್ಞಾನ ಆವಿಷ್ಕಾರ ಸ್ಪರ್ಧೆ ಕಲ್ಪ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹ್ಯಾಕಥಾನ್ ಎಂಬುದು ಹ್ಯಾಕ್ ಮತ್ತು ಮ್ಯಾರಥಾನ್ ಪದಗಳ ಸಂಯೋಜನೆಯಾಗಿದೆ. ಹ್ಯಾಕಾಥಾನ್ ಈಗಿನ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಯುಗಕ್ಕೆ ತಂತ್ರಜ್ಞಾನದ ಆವಿಷ್ಕಾರ ಹಾಗೂ ಸೃಜನಶೀಲತೆಯ ಮಹತ್ವದ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ ಸ್ಪರ್ಧಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್ ಮತ್ತು ಎಂ.ಆರ್.ಸಂಗಮೇಶ್ ಮಾತನಾಡಿ, ನಮ್ಮ ಸಂಸ್ಥೆ ಇಂತಹ ಕಾರ್ಯಕ್ರಮಗಳಿಗೆ ಸದಾ ಉತ್ತೇಜನ ನೀಡಲಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿ ಸ್ಪರ್ಧಿಗಳಿಗೆ ತಂತ್ರಜ್ಞಾನ ಮತ್ತು ಆವಿಷ್ಕಾರದ ಮಹತ್ವ ತಿಳಿಸಿದರು. ಕೆಐಟಿ ಪ್ರಾಂಶುಪಾಲ ಎಚ್.ಸಿ ಸತೀಶ್‌ಕುಮಾರ್ ಮಾತನಾಡಿ, ಎಐ ಇಂದಿನ ದಿನಗಳಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ್ದು ಎಲ್ಲಾ ಕ್ಷೇತ್ರಗಳಿಗೂ ಅನ್ವಯಗೊಳ್ಳುತ್ತಿದೆ. ಹೊಸ ಹೊಸ ಅವಿಷ್ಕಾರವನ್ನು ಎಐ ಬಳಸಿಕೊಂಡು ಕಂಡು ಹಿಡಿಯಲಾಗುತ್ತಿದೆ ಎಂದರು. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಂಡ್ ಮಿಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಡಾ. ಎಂ.ಎಲ್ ರವಿಪ್ರಕಾಶ್ ಮಾತನಾಡಿ ಹ್ಯಾಕಥಾನ್ ಕಾರ್ಯಕ್ರಮ ಪ್ರಾರಂಭವಾದಾಗ ಭಾಗವಹಿಸುವ ವ್ಯಕ್ತಿಗಳು ಅಥಾವ ತಂಡಗಳು ತಮ್ಮ ಪ್ರೋಗ್ರಾಮಿಂಗ್ ಕೆಲಸವನ್ನು ಪ್ರಾರಂಭಿಸುತ್ತಾರೆ. ಹ್ಯಾಕಥಾನ್‌ನ ನಿರ್ವಾಹಕರನ್ನು ಸಾಮಾನ್ಯವಾಗಿ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಕಾರ್ಯಕ್ರಮದಲ್ಲಿ ಅವರ ಸಮಸ್ಯೆಗಳು ಬಂದಾಗ ಸಹಾಯ ನೀಡಲು ಸಾಧ್ಯವಾಗುತ್ತದೆ ಎಂದರು. ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಹತ್ತು ಸಾವಿರ ನಗದು ಮತ್ತು ಪದಕ, ತುಮಕೂರು ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಏಳು ಸಾವಿರದ ಐನೂರು ನಗದು ಮತ್ತು ಪದಕ ಹಾಗೂ ಹಾಸನದ ನೌಕೀಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೃತೀಯ ಬಹುಮಾನ ಐದು ಸಾವಿರ ಮತ್ತು ಪದಕ ನೀಡಿ ಗೌರವಿಸಲಾಯಿತು. ನಾಲ್ಕು ತಂಡಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪಿ.ಕೆ ತಿಪ್ಪೆರುದ್ರಪ್ಪನವರು ಸ್ಪರ್ಧಾರ್ಥಿಗಳಿಗೆ ವಿಡಿಯೋ ಸಂದೇಶದ ಮೂಲಕ ಶುಭಕೋರಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಜಿ.ಪಿ ದೀಪಕ್, ಬಿ.ಎಸ್ ಉಮೇಶ್, ಟಿ.ಎಸ್ ಬಸವರಾಜು, ಕಾರ್ಯದರ್ಶಿಗಳಾದ ಹೆಚ್.ಜಿ ಸುಧಾಕರ್, ಟಿ.ಯು. ಜಗದೀಶ್‌ಮೂರ್ತಿ, ತೀರ್ಪುಗಾರರಾದ ಸಹನ ಕವನ್ ಶಾ, ಗಂಗಾಧರ್ ಸೇರಿದಂತೆ ವಿಭಾಗದ ಮುಖ್ಯಸ್ಥರು, ಬೋಧಕ ಬೋಧಕೇತರ, ಸ್ಪರ್ಧಾರ್ಥಿಗಳು ಸೇರಿದಂತೆ 70ಕ್ಕೂ ಹೆಚ್ಚು ತಂಡಗಳು, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.