ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅವಧಿ ವಿಸ್ತರಿಸಿ: ನೆಲ್ಲಿಗೆರೆ ಬಾಲು ಆಗ್ರಹ

| Published : Oct 07 2025, 01:02 AM IST

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅವಧಿ ವಿಸ್ತರಿಸಿ: ನೆಲ್ಲಿಗೆರೆ ಬಾಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸಮೀಕ್ಷಾಕಾರರಿಗೆ ಸರಿಯಾದ ತರಬೇತಿ ಇಲ್ಲದೆ ಪ್ರಸ್ತುತ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯು ಗೊಂದಲ ಗೂಡಾಗಿದೆ. ಶಿಕ್ಷಕರ ಬದಲು ಅವರ ಮಕ್ಕಳು ಸಮೀಕ್ಷೆ ಮಾಡುತ್ತಿದ್ದಾರೆ. ಜನರು ಒಂದು ಮಾಹಿತಿ ನೀಡಿದರೆ ಸಮೀಕ್ಷಾಕಾರರು ಮತ್ತೊಂದು ಮಾಹಿತಿ ನಮೂದಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅವಧಿಯನ್ನು ವಿಸ್ತರಿಸಬೇಕು. ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ನೀಡಿದ ಬಳಿಕ ಸಮೀಕ್ಷೆ ಮುಂದುವರೆಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಎನ್.ಬಾಲಕೃಷ್ಣ (ನೆಲ್ಲಿಗೆರೆ ಬಾಲು) ಆಗ್ರಹಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷಾಕಾರರಿಗೆ ಸರಿಯಾದ ತರಬೇತಿ ಇಲ್ಲದೆ ಪ್ರಸ್ತುತ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯು ಗೊಂದಲ ಗೂಡಾಗಿದೆ. ಶಿಕ್ಷಕರ ಬದಲು ಅವರ ಮಕ್ಕಳು ಸಮೀಕ್ಷೆ ಮಾಡುತ್ತಿದ್ದಾರೆ. ಜನರು ಒಂದು ಮಾಹಿತಿ ನೀಡಿದರೆ ಸಮೀಕ್ಷಾಕಾರರು ಮತ್ತೊಂದು ಮಾಹಿತಿ ನಮೂದಿಸುತ್ತಿದ್ದಾರೆ ಎಂದು ದೂರಿದರು.

ಒಕ್ಕಲಿಗ ಸಮುದಾಯದವನ್ನು ಗುರಿಯಾಗಿಸಕೊಂಡು ಈ ಸಮೀಕ್ಷೆ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘಕ್ಕೂ ಸಾಕಷ್ಟು ದೂರುಗಳು ಬಂದಿವೆ. ತಪ್ಪು ಮಾಹಿತಿ ಸಂಗ್ರಹಿಸುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುವ ಸಂಭವವಿದೆ ಎಂದು ಆರೋಪಿಸಿದರು.

ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿ ಹೋರಾಟ ಮಾಡಿದರೂ ತರಬೇತಿ ಕೊರತೆಯಿಂದ ತಪ್ಪು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡಿ ನಂತರ ಮರು ಸಮೀಕ್ಷೆ ನಡೆಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಮೀಕ್ಷೆದಾರರು ತಪ್ಪು ಮಾಹಿತಿ ನಮೂದಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಕಂಡು ಬಂದಿದೆ. ಅದಲ್ಲದೇ, ದೂರವಾಣಿ ಕರೆ ಮೂಲಕವೂ ಸಮೀಕ್ಷೆ ನಡೆಸುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಸರ್ಕಾರವೂ ಕಡಿಮೆ ಸಮಯ ನಿಗದಿ ಮಾಡಿ, ತುರಾತುರಿಯಲ್ಲಿ ಸಮೀಕ್ಷೆ ಮಾಡುತ್ತಿರುವುದರ ಹಿನ್ನೆಲೆ ಏನು ಎಂದು ಸಂಶಯ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾತಿ ಸಮೀಕ್ಷೆ ಮಾಡುತ್ತಿರುವಂತಿದೆ. ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ನೀಡಿಲ್ಲ. ಜತೆಗೆ, ಸಮೀಕ್ಷೆ ಬಹಳ ಕಡಿಮೆ ಅವಧಿಯಾಗಿದೆ. 60 ಪ್ರಶ್ನೆಗಳನ್ನು ನಿಗದಿಪಡಿಸಿರುವುದು ಸರಿಯಲ್ಲ. ಈ ಪೈಕಿ ಸಾಕಷ್ಟು ಅನಗತ್ಯ ಪ್ರಶ್ನೆಗಳಿವೆ. ಅವುಗಳನ್ನು ಸಮೀಕ್ಷಾದಾರರು ಜನರಿಗೆ ಕೇಳುತ್ತಿರುವುದು ಸರಿಯಲ್ಲ ಎಂದರು.

ಈ ಹಿಂದೆ ಕಾಂತರಾಜು ಆಯೋಗ ನೀಡಿದ ವರದಿಯು ಅವೈಜ್ಞಾನಿಕವಾಗಿತ್ತು. ಕ್ರಮಬದ್ಧವಾಗಿರದ ಆ ವರದಿಯಲ್ಲೂ ಸಾಕಷ್ಟು ಗೊಂದಲಗಳಿದ್ದವು. ಆ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಹೊಸದಾಗಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ, ಈಗಲೂ ಅದೇ ರೀತಿಯ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ಯಾವುದೇ ಒತ್ತಡ ಹೇರದೆ ಮಾಹಿತಿ ಸಂಗ್ರಹಿಸುವಂತೆ ಹೈಕೋರ್ಟ್ ಸಹ ಆದೇಶ ನೀಡಿದೆ. ಆದಾಗ್ಯೂ ಜನರಿಂದ ಒತ್ತಾಯ ಪೂರ್ವಕವಾಗಿ ಮಾಹಿತಿ ಪಡೆಯುವ ಕೆಲಸ ನಡೆಯುತ್ತಿದೆ. ಮಾಹಿತಿ ಕೊಡುವುದು ಬಿಡುವುದು, ಜನರಿಗೆ ಬಿಟ್ಟದ್ದು. ಈ ಬಗ್ಗೆ ಯಾವುದೇ ಒತ್ತಾಯ ಮಾಡಬಾರದು ಎಂದರು.

ಒಕ್ಕಲಿಗ ಎಂದಷ್ಟೇ ನಮೂದಿಸಿ:

ಸಮೀಕ್ಷೆಯ ವೇಳೆ ಒಕ್ಕಲಿಗ ಸಮುದಾಯದವರು ಧರ್ಮ ಕಾಲಂನಲ್ಲಿ ಹಿಂದು, ಜಾತಿ ಹಾಗೂ ಉಪಜಾತಿ ಎರಡೂ ಕಾಲಂಗಳಲ್ಲಿ ಒಕ್ಕಲಿಗ ಎಂದು ಮಾತ್ರವೇ ನಮೂದಿಸಬೇಕು. ಗೌಡ ಒಕ್ಕಲಿಗ ಎಂದು ನಮೂದಿಸುತ್ತಿರುವುದು ಸರಿಯಲ್ಲ ಎಂದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್) ಮಾತನಾಡಿ, ಸಮೀಕ್ಷೆದಾರರಿಗೆ ಎಲ್ಲಿಯೂ ಸರಿಯಾದ ತರಬೇತಿ ನೀಡಲಾಗಿಲ್ಲ. ತೋಚಿದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಮೀಕ್ಷೆದಾರರಿಗೆ ತರಬೇತಿ ನೀಡಿದ ಮಾಹಿತಿ ನಗರಸಭೆ ಅಧ್ಯಕ್ಷನಾಗಿದ ನನಗೆ ತಿಳಿದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮೊದಲು ಜಾತಿ ಸಮೀಕ್ಷೆ ಎಂದು ಹೇಳಿ ಇದೀಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎನ್ನುತ್ತಿದ್ದಾರೆ. ಈ ಸಮೀಕ್ಷೆಯಿಂದ ಒಕ್ಕಲಿಗ ಸಮುದಾಯದಕ್ಕೆ ಅನ್ಯಾಯವಾಗಲಿದೆ. ಸರಕಾರ ಸರಿಯಾದ ತರಬೇತಿ ನೀಡಿ ಮರುಸಮೀಕ್ಷೆ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿದೇಶಕ ರಾಘವೇಂದ್ರ, ನಿರ್ದೇಶಕ ಸಿ.ಜೆ.ಗಂಗಾಧರ್, ಜಿಲ್ಲಾ ಒಕ್ಕಲಿಗರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಜೆ.ಮ್ಮಯ್ಯ, ಸಮುದಾಯದ ಮುಖಂಡರಾದ ಎಲ್.ಕೃಷ್ಣ, ಎಸ್.ಎಂ.ವೇಣುಗೋಪಾಲ್ ಸಾತನೂರು, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಇದ್ದರು.ಜಾತಿಗಣತಿ ಸಮೀಕ್ಷೆ ಅವೈಜ್ಞಾನಿಕ: ಡೀಸಿಗೆ ಮನವಿ ಸಲ್ಲಿಕೆ

ಮಂಡ್ಯ:

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವಿರುದ್ಧ ರಾಜ್ಯ ಒಕ್ಕಲಿಗರ ಸಂಘ ಹಾಗೂ ಸಮುದಾಯದ ಮುಖಂಡರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಒಕ್ಕಲಿಗರ ಸಂಘದ ನಿರ್ದೇಶಕ ನಲ್ಲಿಗೆರೆ ಬಾಲು ನೇತೃತ್ವದಲ್ಲಿ ಡೀಸಿ ಮೂಲಕ ಹಿಂದೂಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಕೈಯಲ್ಲಿ ಜಾತಿ ಸಮೀಕ್ಷೆ ಮಾಡಿಸುತ್ತಿದ್ದಾರೆ. ಸಮೀಕ್ಷೆದಾರರಿಗೆ ಸೂಕ್ತ ತರಬೇತಿ ನೀಡಿಲ್ಲ. ಎಲ್ಲವೂ ಗೊಂದಲದಿಂದ ಕೂಡಿದೆ. ಈ ಬಗ್ಗೆ ಅವೈಜ್ಞಾನಿಕ ಸಮೀಕ್ಷೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಗಣತಿದಾರರು ಇಷ್ಟಬಂದ ರೀತಿ ಮಾಹಿತಿ ಬರೆದು ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಯಲ್ಲು ಇರದ 60 ಪ್ರಶ್ನೆ ಕೊಟ್ಟಿದ್ದಾರೆ, ಇದು ಸಾರ್ವಜನಿಕರಿಗೆ ಗೊಂದಲ ಉಂಟಾಗಿದೆ. ತಕ್ಷಣವೇ ಸರ್ಕಾರ ಸಮೀಕ್ಷೆ ಮುಂದೂಡಿ ಮರು ಸಮೀಕ್ಷೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ನಗರಸಭೆ ಅಧ್ಯಕ್ಷ ನಾಗೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಘವೇಂದ್ರ, ಕೃಷ್ಣ ಸೇರಿ ಹಲವರು ಭಾಗವಹಿಸಿದ್ದರು.