ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ಸೇರಿದಂತೆ ಇತರೆ ರಾಜಕೀಯ ಪಕ್ಷಗಳ ನಾಯಕರು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಸಾಮಾಜಿಕ ನ್ಯಾಯದ ವಿರೋಧಿಗಳಾಗಿದ್ದಾರೆ ಎಂದು ಜಾಗೃತ ಕರ್ನಾಟಕ ಜಿಲ್ಲಾ ಘಟಕ ಕಿಡಿಕಾರಿದೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗೃತ ಕರ್ನಾಟಕ ಜಿಲ್ಲಾ ಸಂಚಾಲಕರಾದ ಎನ್.ನಾಗೇಶ್ ಹಾಗೂ ಪೃಥ್ವಿರಾಜ್, ಭಾರತದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕವಾಗಿ ಯಾವ ಜಾತಿಗಳು ಎಷ್ಟು ಹಿಂದುಳಿದಿವೆ?, ಎಷ್ಟು ಮುಂದುವರೆದಿವೆ? ಎನ್ನುವುದನ್ನು ಕಾಲಕಾಲಕ್ಕೆ ಅಧ್ಯಯನ ಮಾಡಬೇಕು. ಅದಕ್ಕಾಗಿ ಸಮೀಕ್ಷೆ ನಡೆಯಬೇಕು. ಇದಕ್ಕೆ ಅಡ್ಡಗಾಲು ಹಾಕುವುದು ಸಾಮಾಜಿಕ ನ್ಯಾಯದ ವಿರೋಧಿ ನಡೆಯಾಗಿದೆ ಎಂದು ಖಂಡಿಸಿದರು.
ಸವೋಚ್ಚ ನ್ಯಾಯಾಲಯವು (ಮಂಡಲ್ ಕೇಸಿನಲ್ಲಿ) ಎಲ್ಲಾ ರಾಜ್ಯಗಳು ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಬೇಕು ಎಂದು ಹೇಳಿದೆ. ಆನಂತರ ಬಂದ ಕಾಯ್ದೆಗಳು ಈ ಆಯೋಗಗಳು 10 ವರ್ಷಕ್ಕೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು ಎಂದು ಹೇಳಿವೆ. ಅದರಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯು ನ್ಯಾಯಯುತವಾಗಿದೆ ಎಂದರು.ಸಮೀಕ್ಷೆಯಲ್ಲಿ ಸರ್ವ ಸಮುದಾಯಗಳ ಹಿತ ಅಡಗಿದೆ. ಹಿಂದುಳಿದಿರುವ ಜಾತಿಗಳನ್ನು ಗುರುತಿಸಿ ಅವುಗಳ ಬೆಳವಣಿಗೆಗೆ ಅನುಕೂಲವಾಗುವ ಶಿಫಾರಸುಗಳನ್ನು ಮಾಡುವುದರಿಂದ ಸಹಜವಾಗಿ ಇದರಿಂದ ಹಿಂದುಳಿದಿರುವ ಎಲ್ಲಾ ಜಾತಿ-ಉಪಜಾತಿಗಳಿಗೆ ಲಾಭ ಇದೆ. ಇದಕ್ಕೆ ವಿರೋಧ ಮಾಡುವವರು ಹಿಂದುಳಿದವರ ವಿರೋಧಿಗಳೇ ಆಗಿದ್ದಾರೆ ಎಂದು ಕಿಡಿಕಾರಿದರು.
ಜಾತಿ ಸಮೀಕ್ಷೆಗೆ ವಿರೋಧ ಮಾಡುವವರು ಸಾಮಾಜಿಕ ನ್ಯಾಯದ ವಿರೋಧಿಗಳು. ನಮ್ಮ ಮತಗಳನ್ನು ತೆಗೆದುಕೊಂಡು ಅಧಿಕಾರ ಪಡೆದು ನಮ್ಮ ವಿರುದ್ಧ ಮಸಲತ್ತು ನಡೆಸುತ್ತಿರುವ ಖಳನಾಯಕರು. ಇಂತವರ ವಿರುದ್ಧ ಹಿಂದುಳಿದ ಸಮುದಾಯಗಳು ಒಗ್ಗಟ್ಟಾಗುತ್ತಿವೆ. ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ವಿರೋಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಸಿದರು.ಇದೇ ವೇಳೆ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಮೀಕ್ಷೆ ವೇಳೆ ಆಗುತ್ತಿರುವ ಸಣ್ಣಪುಟ್ಟ ಲೋಪದೋಷಗಳನ್ನು ಕೂಡಲೇ ಬಗೆಹರಿಸಬೇಕು. ಸಮೀಕ್ಷೆಯಿಂದ ಸರ್ವ ಸಮುದಾಯಗಳ ಹಿಂದುಳಿದವರ ಹಿತ ಅಡಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಾಗೃತ ಕರ್ನಾಟಕದ ಮಂಡ್ಯ ಘಟಕದ ಸಂಚಾಲಕರಾದ ಸಂತೋಷ್ ಜಿ, ನಗರಕೆರೆ ಜಗದೀಶ್, ಸುಬ್ರಮಣ್ಯ ಹಾಗೂ ಪ್ರಶಾಂತ್ ಭಾಗವಹಿಸಿದ್ದರು.