ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆದಿರುವ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ೨೦೨೪ ಡಿಸೆಂಬರ್ ೩೧ರ ವರೆಗೂ ಕಾಲಾವಕಾಶ ನೀಡಿರುವುದಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಎಚ್.ಟಿ. ಮೋಹನ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೂರದೃಷ್ಟಿಯನ್ನು ಹೊಂದಿ ಕಾಫಿ ಬೆಳೆಗಾರರ ಅನಧಿಕೃತ ಸಾಗುವಳಿ ಜಮೀನನ್ನು ೩೦ ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಅವಕಾಶ ಕಲ್ಪಿಸಿದೆ ಎಂದರು.೧೯೯೫ ರಿಂದಲೂ ಈ ನಿಟ್ಟಿನಲ್ಲಿ ಬೆಳೆಗಾರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಾ ಕಂದಾಯ ಜಮೀನನ್ನು ಸಕ್ರಮ ಮಾಡಿಕೊಡುವ ಬೇಡಿಕೆಯನ್ನು ಮುಂದಿಟ್ಟಿತ್ತು. ೨೦೧೭-೧೮ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಕಾಫಿ ಬೆಳೆಗಾರರ ಅನಧಿಕೃತ ಸಾಗುವಳಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಬಜೆಟ್‌ನಲ್ಲಿ ಅನುಮೋದಿಸಿತ್ತು. ಬಸವರಾಜ್ ಬೊಮ್ಮಾಯಿರವರ ಸರ್ಕಾರವು ೨೫ ಎಕರೆ ವರೆಗಿನ ಪ್ಲಾಂಟೇಶನ್ ಬೆಳೆಗಳ ಅನಧಿಕೃತ ಸಾಗುವಳಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಅನುಮೋದಿಸಿತ್ತು. ಪ್ರಸ್ತುತ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಕಾಫಿ, ಪ್ಲಾಂಟೇಷನ್ ಬೆಳೆಯುವ ಜಿಲ್ಲೆಗಳಿಗೆ ಅನ್ವಯವಾಗುವಂತೆ ಅನಧಿಕೃತ ಸಾಗುವಳಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ೨೦೦೫ರ ಪೂರ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆದಿರುವ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಡಿಸೆಂಬರ್ 31ರವರೆಗೆ ಕಾಲಾವಕಾಶ ಕಲ್ಪಿಸಿಕೊಟ್ಟಿದೆ. ನಿಗದಿತ ಅರ್ಜಿಯೊಂದಿಗೆ ಕೆಲ ಅಗತ್ಯ ದಾಖಲೆಗಳನ್ನು ಬೆಳೆಗಾರರು ನೀಡಬೇಕಾಗುತ್ತದೆ. ಬೆಳೆಗಾರರು ಗಡುವು ನೀಡಿರುವ ದಿನದೊಳಗೆ ಅರ್ಜಿಗಳನ್ನು ಸಲ್ಲಿಸಿ ಗುತ್ತಿಗೆ ಆಧಾರದಲ್ಲಿ ಪಡೆಯಲು ಮುಂದಾಗಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಟಪ್ಪ, ಖಜಾಂಚಿ ಎಂ.ಜೆ. ಸಚಿನ್, ನಿರ್ದೇಶಕರಾದ ಬಿ.ಎಂ. ನಾಗರಾಜು, ಎಂ.ಟಿ. ತಾರನಾಥ್, ಬಿ.ಜಿ. ಯತೀಶ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.