ಸಾರಾಂಶ
ದೇವಸ್ಥಾನದ ಹೆಸರಿನ ಮೇಲೆ ತಮ್ಮ ಜಂಟಿ ಹೆಸರಿನಲ್ಲಿ ತೆರೆದಿರುವ ಖಾಸಗಿ ಖಾತೆಯಲ್ಲಿರುವ ಹಣವನ್ನು ಸರ್ಕಾರದ ಅಧಿಕೃತ ಖಾತೆಗೆ ಜಮೆ ಮಾಡಲು ಆದೇಶಿಸಬೇಕು ಎಂದು ದಸಂಸ ಆಗ್ರಹಿಸಿದೆ
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಯಕ್ತಾಪುರದ ಪುರಾತನ ಗುತ್ತಿಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯನ್ನು ಹೆಸರಿಗೆ ಮಾತ್ರ ರಚಿಸಿ, ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಸಂಸ (ಕ್ರಾಂತಿಕಾರಿ ಬಣ) ಸದಸ್ಯರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮುಖಂಡರು, ತಾಲೂಕಿನ ಕೆಂಭಾವಿ ಹೋಬಳಿಯಲ್ಲಿ ಬರುವ ಯಕ್ತಾಪುರದ ಗುತ್ತಿಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹೆಸರಿಗೆ ಮಾತ್ರ ವಿರೂಪಾಕ್ಷಯ್ಯ ಅಡಿವೆಯ್ಯ ರಚಿಸಿದ್ದಾರೆ. ಅಲ್ಲದೆ ದೇವಸ್ಥಾನದ ಒಂದು ಮೂಲೆ ಒಡೆದು ಜೀರ್ಣಾಭಿವೃದ್ಧಿ ಹೆಸರಿನಲ್ಲಿ ಕಟ್ಟಡ ಹಾಗೂ ಶಿಖರದ ದೇಣಿಗೆ ಪಾವತಿ ಎಂದು ತಾವೇ ರಸೀದಿ ಮಾಡಿಕೊಂಡು ದೇವರ ಹೆಸರಿನಲ್ಲಿ ದೇಣಿಗೆ ವಸೂಲಿ ಮಾಡಿದ್ದಾರೆ. ಇದರಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ದೇವಸ್ಥಾನದ ಹೆಸರಿನ ಮೇಲೆ ತಮ್ಮ ಜಂಟಿ ಹೆಸರಿನಲ್ಲಿ ತೆರೆದಿರುವ ಖಾಸಗಿ ಖಾತೆಯಲ್ಲಿರುವ ಹಣವನ್ನು ಸರ್ಕಾರದ ಅಧಿಕೃತ ಖಾತೆಗೆ ಜಮೆ ಮಾಡಲು ಆದೇಶಿಸಬೇಕು. ದೇವಸ್ಥಾನದ ಕಲ್ಯಾಣ ಮಂಟಪ ಮತ್ತು ಇತರೆ ಉಸ್ತುವಾರಿಗೆ ಸರ್ಕಾರವು ಬೇರೊಬ್ಬರನ್ನು ನೇಮಿಸಬೇಕು. ಸರ್ಕಾರದ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ದೇವಸ್ಥಾನ ಸ್ವಚ್ಛಗೊಳಿಸಲು ದಲಿತರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.ದೇಗುಲದಲ್ಲಿ ಒಂದು ವಿವಾಹಕ್ಕೆ ₹15ರಿಂದ ₹20ಸಾವಿರ ನಿಗದಿ:
ಪ್ರತಿ ವರ್ಷ ಸುಮಾರು 100-150 ವಿವಾಹ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರಾವಣ ಮಾಸದಲ್ಲಿ ತಿಂಗಳ ಪೂರ್ತಿ ನೂರಾರು ಭಕ್ತರು ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇದರ ಲೆಕ್ಕ-ಪತ್ರಗಳನ್ನು ಅಧಿಕಾರಿಗಳಿಗೆ ಸರಿಯಾಗಿ ನೀಡದೇ ಸ್ಥಳೀಯ ಪ್ರಭಾವಿಗಳು ಅಧಿಕಾರಿಗಳ ಬಾಯಿ ಮುಚ್ಚಿಸಿರುತ್ತಾರೆ ಎಂದು ದೂರಿದರು.ಭಕ್ತರು ದೇಗುಲಕ್ಕೆ ನೀಡಿದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತಮ್ಮ ಬಳಿಯಲ್ಲಿಟ್ಟುಕೊಂಡು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದರೂ ತಾಲೂಕು ಆಡಳಿತ ಕ್ರಮ ಕೈಗೊಂಡಿಲ್ಲ. ದೇಗುಲ ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವ್ರವಾಗುತ್ತದೆ ಎಂದು ಎಚ್ಚರಿಸಿದರು.
ರವಿಚಂದ್ರ ಬೊಮ್ಮನಹಳ್ಳಿ, ಮಾನು ಗುರಿಕಾರ, ಮಲ್ಲಿಕಾರ್ಜುನ ಕ್ರಾಂತಿ, ಬಸವರಾಜ ದೊಡ್ಡಮನಿ, ಮಹೇಶ ಯಾದಗಿರಿ, ಮಲ್ಲಿಕಾಜುನ ಶಾಖನವರ್, ರಾಮಣ್ಣ ಶೆಳ್ಳಗಿ, ಅಜೀಜ್ ಸಾಬ್, ಮೂರ್ತಿ ಬೊಮ್ಮನಹಳ್ಳಿ, ಚಂದ್ರಪ್ಪ ತಳಕ, ನಿಂಗಪ್ಪ ಕಟಗಿ, ಮಲ್ಲಿಕಾರ್ಜುನ ಗುಡ್ಡೇರ, ಮಲ್ಲಪ್ಪ ಬಾದ್ಯಾಪುರ, ಶರಣಪ್ಪ ಬೊಮ್ಮನಹಳ್ಳಿ, ಹಣಮಂತದೊರೆ, ಉಮೇಶ ಲಿಂಗೇರಿ ಸೇರಿದಂತೆ ಇತರರಿದ್ದರು.