ಸಾರಾಂಶ
ಡಾ. ತೋಂಟದ ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ತೋಂಟದಾರ್ಯ ಮಠದ 284ನೇ ಜಾತ್ರೆ ಫೆ. 24ರಿಂದ ಫೆ. 25ರ ವರೆಗೆ ನಡೆಯಲಿದೆ. ರೊಟ್ಟಿ ಜಾತ್ರೆ ಎಂದು ಪ್ರಸಿದ್ಧವಾದ ಈ ಜಾತ್ರೆಯಲ್ಲಿ ನಾಡಿನ ವಿವಿಧ ಭಾಗಗಳ ಭಕ್ತರು ಪಾಲ್ಗೊಳ್ಳುತ್ತಾರೆ.
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಕರುನಾಡಿನಲ್ಲಿಯೆ ಕನ್ನಡ, ನೆಲ, ಜಲ, ಪರಿಸರ ಕೋಮು ಸೌಹಾರ್ದತೆ ಹಾಗೂ ಜಾತ್ಯತೀತ ಮನೋಭಾವನೆ ಮೂಡಿಸುವ ತೋಂಟದಾರ್ಯ ಜಾತ್ರೆಯಲ್ಲಿ ಜರುಗುವ ರೊಟ್ಟಿ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆ ಭರದಿಂದ ಸಾಗಿದೆ.ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ದೂರದೃಷ್ಟಿಯ ದ್ಯೋತಕವಾಗಿ ಬಸವಣ್ಣನವರ ತತ್ವದಡಿ ಜಾತಿ ಮತ ಪಂಥ ತೊಲಗಿಸುವ ಮೂಲಕ ಭಾವೈಕ್ಯತೆ ಮೂಡಿಸುವ ಹಿನ್ನೆಲೆ ರೊಟ್ಟಿ ಜಾತ್ರೆ ಆರಂಭಿಸಿದರು. ಎಲ್ಲರೂ ಕೂಡಿ ಸಂತೋಷದಾಯಕವಾಗಿ ರೊಟ್ಟಿ ಸವಿಯುವಂತೆ ಮಾಡಿದ್ದರು.
ಡಾ. ತೋಂಟದ ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ತೋಂಟದಾರ್ಯ ಮಠದ 284ನೇ ಜಾತ್ರೆ ಫೆ. 24ರಿಂದ ಫೆ. 25ರ ವರೆಗೆ ನಡೆಯಲಿದೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸೇರಿ ರೊಟ್ಟಿ ಜಾತ್ರೆ ನಡೆಸುತ್ತಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಡೊಳ್ಳಿನ ಪದ, ಲಂಬಾಣಿ ಪದ ಮತ್ತು ಮಕ್ಕಳಿಂದ ವಿವಿಧ ಕಾರ್ಯಕ್ರಮ ರೊಟ್ಟಿ ಜಾತ್ರೆಯ ವಿಶೇಷ. ಪ್ರತಿವರ್ಷ ಮಠದ ಜತೆ ಜತೆಗೆ ಜರಗುವ ಜಮಾಲಶಾವಲಿ ಶರಣರ ಉರುಸು ಫೆ.26ರಂದು, ಗಂಧ ಫೆ. 27ರಂದು ಜರುಗುವುದು.20 ಕ್ವಿಂಟಲ್ ಜೋಳದ ಹಿಟ್ಟು: ಈಗಾಗಲೆ ಪ್ರಸಾದಕ್ಕೆ ಬೇಕಾಗುವ ಸಿದ್ಧತೆ ಆರಂಭವಾಗಿದೆ. ಜಾತಿ ಭೇದವಿಲ್ಲದೆ ಮನೆಯಿಂದ 50ರಿಂದ 100ಕ್ಕೂ ಹೆಚ್ಚು ರೊಟ್ಟಿ ಸಿದ್ಧಪಡಿಸಿ ಮಠಕ್ಕೆ ತಂದುಕೊಡುತ್ತಾರೆ. ಈ ಬಾರಿ ಮಠದಿಂದ 20 ಕ್ವಿಂಟಲ್ ಜೋಳದ ಹಿಟ್ಟನ್ನು ಡಂಬಳ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಹಿಳಾ ಸ್ವಸಹಾಯ ಗುಂಪುಗಳು, ಸುತ್ತಮುತ್ತಲಿನ ಗ್ರಾಮದ ಮಹಿಳೆಯರಿಗೆ ನೀಡಲಾಗಿದೆ. ಅವರು ಸ್ವಪ್ರೇರಣೆಯಿಂದ ರೊಟ್ಟಿಯನ್ನು ಮಾಡಿಕೊಂಡು ಮಠಕ್ಕೆ ನೀಡಿದ್ದಾರೆ. ಅಲ್ಲದೆ ಡೋಣಿ, ಡೋಣಿ ತಾಂಡಾ, ಹೈತಾಪುರ, ರಾಮೇನಳ್ಳಿ, ಯಕ್ಲಾಸಪುರ ಮತ್ತಿತರ ಊರುಗಳಿಂದ ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ರೊಟ್ಟಿಯನ್ನು ಜಾತ್ರೆಗೆ ತರಲಾಗಿದೆ.
ಕರಿ ಹಿಂಡಿ, ಬಾನದ ಅನ್ನದ ವಿಶೇಷ: ಈ ಜಾತ್ರೆಯಲ್ಲಿ ಅನ್ನದಿಂದ ಮಾಡಿದ ಬಾನ ಮತ್ತು ಕರಿ ಹಿಂಡಿಯನ್ನು ತಯಾರಿಸುತ್ತಾರೆ. ಎಲ್ಲ ತರಕಾರಿ ಪದಾರ್ಥಗಳು, ಅಕ್ಕಿ, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ, ಮೆಣಸಿನಕಾಯಿ ಇವುಗಳಿಂದ ಕರಿಹಿಂಡಿ ತಯಾರಿಸಲಾಗುತ್ತದೆ. ಇದರ ಜತೆಗೆ ಅನ್ನದ ಬಾನ, ಇದನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಅಗಸಿ, ಗುರೆಳ್ಳು ಹಿಂಡಿ, ಸವಿಯಲು ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.