ನಷ್ಟ ಸರಿದೂಗಿಸಲು ದರ ಪರಿಷ್ಕರಣೆ ಪರಿಹಾರವಲ್ಲ: ಪಿ. ರವಿಕುಮಾರ

| Published : Feb 22 2024, 01:45 AM IST

ಸಾರಾಂಶ

ನವನಗರದಲ್ಲಿರುವ ಹೆಸ್ಕಾಂ ನೂತನ ಭವನದಲ್ಲಿ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕರ ಆಕ್ಷೇಪಣೆ ಸ್ವೀಕಾರ ಸಭೆ ನಡೆಯಿತು.

ಹುಬ್ಬಳ್ಳಿ: ಹೆಸ್ಕಾಂ ನಷ್ಟ ಸರಿದೂಗಿಸಲು ದರ ಪರಿಷ್ಕರಣೆಯೊಂದೇ ಪರಿಹಾರವಲ್ಲ. ಆಗುತ್ತಿರುವ ನಷ್ಟವನ್ನು ಇತರೆ ಮಾರ್ಗ ಬಳಸಿ ಕಡಿಮೆ ಮಾಡಿಕೊಳ್ಳುವುದು ಸೂಕ್ತ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ ತಿಳಿಸಿದ್ದಾರೆ. ಈ ಮೂಲಕ‌ ವಿದ್ಯುತ್ ದರ ಏರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಬುಧವಾರ ಇಲ್ಲಿನ ನವನಗರದಲ್ಲಿರುವ ಹೆಸ್ಕಾಂ ನೂತನ ಭವನದಲ್ಲಿ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕರ ಆಕ್ಷೇಪಣೆ ಸ್ವೀಕಾರ ಸಭೆಯಿತ್ತು. ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಿದರು. ಇದೇ ವೇಳೆ ಹೆಸ್ಕಾಂ ಎಂಡಿ ಮೊಹ್ಮದ ರೋಷನ್ ಪಿಪಿಟಿ ಪ್ರದರ್ಶನ ನೀಡಿ ಹೆಸ್ಕಾಂ ಯಾವ ರೀತಿ ಹಣದ ಕೊರತೆ ಎದುರಿಸುತ್ತಿದೆ ಎಂಬುವುದನ್ನು ವಿವರಿಸಿದರು. ಸಾರ್ವಜನಿಕರ ಆಕ್ಷೇಪಣೆ ಹಾಗೂ ಹೆಸ್ಕಾಂನ‌ ವಿವರ ಕೇಳಿದ‌ ರವಿಕುಮಾರ್, ಬಳಿಕ‌ ಮಾತನಾಡಿದರು.

ಪ್ರತಿ ವರ್ಷವೂ ವಿದ್ಯುತ್ ದರ ಪರಿಷ್ಕರಣಗೆ ಅರ್ಜಿ ಸಲ್ಲಿಸಿ ಅದಕ್ಕೆ ಒಪ್ಪಿಗೆ ಕೊಡುತ್ತಾ ಹೋದರೆ ಜನ ಸಾಮಾನ್ಯರಿಗೆ ಹೊರೆಯಾಗುತ್ತದೆ. ಆಗುತ್ತಿರುವ ನಷ್ಟವನ್ನು ವಿದ್ಯುತ್ ವಿತರಣೆಯಲ್ಲಿ ಆಗುತ್ತಿರುವ ಸೋರಿಕೆ, ಅನಾವಶ್ಯಕ ಖರೀದಿ ಸೇರಿದಂತೆ ಇತರೆ ಪೋಲು ಕಡಿಮೆ ಮಾಡಿ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು. ಪರಿಣಾಮಕಾರಿಯಾಗಿ ವಿದ್ಯುತ್ ಶುಲ್ಕ ವಸೂಲಿ ಮಾಡಬೇಕು ಎಂದು ಸೂಚಿಸಿದರು.

ವಿತರಣಾ ವ್ಯವಸ್ಥೆಯಲ್ಲಿ ಆಗುತ್ತಿರುವ ನಷ್ಟವನ್ನು ಕಡಿಮೆ ಮಾಡಲು ಆಗುತ್ತಿಲ್ಲ ಎಂದರೆ ಹೇಗೆ? ಈ ಹಾನಿ ನೇರವಾಗಿ ಗ್ರಾಹಕರ ಮೇಲೆ ಹಾಕಲಾಗುತ್ತಿದೆ. ಬೇರೆಡೆ ಈ ನಷ್ಟ ಕಡಿಮೆಯಿದ್ದು, ಇಲ್ಲಿ ಯಾಕೆ ಹೆಚ್ಚಿದೆ ಎಂದ ಅವರು, ಕಾರವಾರ ಜಿಲ್ಲೆ ಕೆಲವೆಡೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಅವಕಾಶ ನೀಡದಿರುವ ದೂರುಗಳೂ ಬಂದಿವೆ. ಅಂತಹ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವಾಗಬೇಕು. ಈ‌ ನಿಟ್ಟಿನಲ್ಲಿ ಹೆಸ್ಕಾಂ ಕೆಲಸ‌ ಮಾಡಬೇಕು ಎಂದು ಸೂಚಿಸಿದರು.

ಇದೇ ವೇಳೆ‌ ದೂರದ ಊರುಗಳಿಂದ ಆಗಮಿಸಿ ಸಲಹೆ ಸೂಚನೆ ಹಾಗ ಆಕ್ಷೇಪಣೆ ಸಲ್ಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ವ್ಯವಸ್ಥಾಪಕ ನಿರ್ದೇಶಕ ಮೊಹ್ಮದ್ ರೋಷನ್ ಮಾತನಾಡಿ, 2025ನೇ ಸಾಲಿನಲ್ಲಿ ಹೆಸ್ಕಾಂನಿಂದ 13094.12 ಮಿಲಿಯನ್ ಯುನಿಟ್ ಮಾರಾಟವಾಗುತ್ತದೆ. ಇಷ್ಟು ಯುನಿಟ್ ಮಾರಾಟದಿಂದ ₹12244.20 ಕೋಟಿ ನಿವ್ವಳ ಸರಾಸರಿ ಕಂದಾಯ ಗುರಿ ಹೊಂದಿದೆ. ಪಸ್ತುತ ವಿದ್ಯುತ್ ದರದಿಂದ ₹11502.45 ಕೋಟಿ ಕಂದಾಯ ಬರಲಿದೆ. ಹೀಗಾಗಿ, ₹741.75ಕೋಟಿ ಕಂದಾಯ ಕೊರತೆಯಾಗಲಿದೆ. ಪ್ರತಿ ಯುನಿಟ್‌ಗೆ 57ಪೈಸೆ ಹೆಚ್ಚಳ ಮಾಡಿದರೆ ನಷ್ಟ ಸರಿದೂಗಿಸಬಹುದಾಗಿದೆ ಎಂಬುದು ಹೆಸ್ಕಾಂ ದರ ಹೆಚ್ಚಳದ ಪ್ರಸ್ತಾವನೆಯಾಗಿದೆ. ಇದಕ್ಕೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮತಿ ನೀಡುವಂತೆ ಕೋರಿದರು.

ಶ್ವೇತಪತ್ರ ಹೊರಡಿಸಲಿಬರೀ ನಷ್ಟ ಎಂದು ಹೇಳುತ್ತಾರೆ. ಈ ಕುರಿತು ಶ್ವೇತಪತ್ರ ಹೊರಡಿಸಲಿ. ಸೋಲಾರ್ ವಿದ್ಯುತ್ ನೀಡುವವರ ಬಿಲ್ ನೀಡಲು ವರ್ಷಗಟ್ಟಲೆ ಬೇಕು. ಅದೇ ಗ್ರಾಹಕ ಸಣ್ಣ ತಪ್ಪು ಅಥವಾ ವಿಳಂಬವಾದರೆ ದಂಡ ಬೀಳುತ್ತದೆ ಎನ್ನುತ್ತಾರೆ ಜಮಖಂಡಿಯ ಎಚ್.ಕೆ. ಬೀಳಗಿ.

ಸಕಾಲಕ್ಕೆ ಬಿಲ್ ಆಗಲ್ಲ

ಗ್ರಾಹಕರು ಹೆಸ್ಕಾಂ ಗ್ರೀಡ್ ಗೆ ನೀಡುವ ಸೋಲಾರ್ ವಿದ್ಯುತ್ ಶುಲ್ಕ ಸಕಾಲಕ್ಕೆ ಪಾವತಿಯಾಗುವುದಿಲ್ಲ. ವಿಳಂಬ ಮಾಡಿದರೆ ಬಡ್ಡಿ ಕೊಡುವುದಿಲ್ಲ. ಇದಕ್ಕಾಗಿ ಕಚೇರಿಗಳಿಗಾಗಿ ಓಡಾಡಬೇಕು. ಪ್ರತಿ ವರ್ಷ ಸೋಲಾರ್ ವಿದ್ಯುತ್‌ಗೆ ನೀಡುವ ಶುಲ್ಕ ಕಡಿಮೆ ಮಾಡುತ್ತಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಇಷ್ಟೊಂದು ಬಂಡವಾಳ ಹಾಕಿ ಉಚಿತವಾಗಿ ಕೊಡುವಂತಾಗಲಿದೆ ಎನ್ನುತ್ತಾರೆ

ಕುಮಟಾದ ಅರವಿಂದ ಪೈ.

ದರ ಕಡಿಮೆ

ನಿರಂತರ ವಿದ್ಯುತ್ ಬೇಕು ಎನ್ನುವ ಕಾರಣಕ್ಕೆ ಸುಮಾರು ₹1.15ಕೋಟಿ ಖರ್ಚು ಮಾಡಿ ಎಸ್.ಟಿ. ಲೈನ್ ತೆಗೆದುಕೊಂಡಿದ್ದೆವು. ನಾವು ವಿದ್ಯುತ್ ತೆಗೆದುಕೊಂಡಾಗ ಪ್ರತಿ ಯುನಿಟ್‌ಗೆ 60 ಪೈಸೆಯಿತ್ತು. ಆಗ ಟನ್ ಕಬ್ಬಿಗೆ ₹2850 ಈಗ ವಿದ್ಯುತ್ ಬಿಲ್ ಪ್ರತಿ ಯುನಿಟ್ ಗೆ 3.50 ಪೈಸೆ ಕಬ್ಬಿನ ಬೆಲೆ ₹2700 ಇದರಿಂದ ರೈತ ಉಳಿಯಲು ಸಾಧ್ಯವೇ? ದರ ಕಡಿಮೆ ಮಾಡಿದರೆ ಈ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಕಾಗವಾಡದ ಆರ್.ಎಂ. ಪಾಟೀಲ.