ಸಾರಾಂಶ
ಗದಗ: ಮಕ್ಕಳ ಕಲಿಕಾ ಸಾಮರ್ಥ್ಯಗಳು ಆಸಕ್ತಿದಾಯಕ ಕ್ಷೇತ್ರಗಳು, ಕಲಿಕಾ ಶೈಲಿ ಹಾಗೂ ಮಗುವಿನ ಅಗತ್ಯ ಕಲಿಕೆಯ ಮೇಲೆ ನಿರಂತರ ಪ್ರಭಾವ ಬೀರುತ್ತವೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಯ ಬೌದ್ಧಿಕ ವಿಕಾಸಕ್ಕೆ ಸಹಕಾರಿ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ನಗರದ ಪಂ. ಪುಟ್ಟರಾಜ ಕವಿ ಗವಾಯಿಗಳ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವೀರೇಶ್ವರ ಪುಣ್ಯಾಶ್ರಮ ಅಂಧ-ಅನಾಥರ ಬಾಳಿನ ಭಾಗ್ಯದ ಬಾಗಿಲು. ಇಲ್ಲಿ ಹಾಡುವ ಹಕ್ಕಿಗಳು ಸಾವಿರಾರು. ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಕ್ತ ಅವಕಾಶ ಶ್ರೀಮಠವು ಎಲ್ಲರಿಗೂ ಕಲ್ಪಿಸಿದ್ದು, ಇಲ್ಲಿ ಜ್ಞಾನಾರ್ಜನೆ ಗೈಯುತ್ತಿರುವ ಪ್ರತಿಯೊಬ್ಬರೂ ಸುದೈವಿಗಳು. ಮಕ್ಕಳು ಜ್ಞಾನದಾಹಿಗಳಾಗಿ ಇಲ್ಲಿ ಸಿಗುವ ಬದುಕಿನ ಎಲ್ಲ ಅನುಭವದ ಪಾಠ ಕಲಿತು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.ಇಸಿಓ ಐ.ಬಿ. ಮಡಿವಾಳರ ಮಾತನಾಡಿ, ಶಾಲೆಗಳು ಕುಟುಂಬದ ರೀತಿಯಲ್ಲಿ ಮಕ್ಕಳೊಂದಿಗೆ ಸಂಪರ್ಕ ಹೊಂದಿದಾಗ ಅಲ್ಲಿ ಆತ್ಮಿಯತೆಯು ಬೆಸೆದು ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸುವರು ಎಂದರು.
ಸಂಪನ್ಮೂಲ ವ್ಯಕ್ತಿ ಟಿ.ಎಸ್. ಹೂಗಾರ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಬೌದ್ಧಿಕ ವಿಕಸನೆಗೆ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರೋತ್ಸಾಹದಾಯಕ ವಾತಾವರಣ ಮಕ್ಕಳಿಗೆ ಸ್ಫೂರ್ತಿ ನೀಡುತ್ತದೆ ಎಂದರು.ಶಾಲಾ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ, ಆಡಳಿತ ಮಂಡಳಿಯ ಪ್ರಕಾಶ ಬಸರಿಗಿಡದ, ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರೀಗಳು ಹಿರೇಮಠ, ಪುರಾಣ ಪ್ರವಚನಕಾರ ಫಕ್ಕೀರಯ್ಯ ಶಾಸ್ತ್ರೀಗಳು ಹಿರೇಮಠ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಕೆ.ಬಿ. ಹಿರೇಮಠ ವಹಿಸಿದ್ದರು. ಶಾಲೆಯ ಗಂಡು ಮಕ್ಕಳು ಹೆಣ್ಣು ಮಕ್ಕಳಾಗಿ ವೇಷತೊಟ್ಟು ಮಾಡಿದ ವೇಷಭೂಷಣ, ಜನಪದ ನೃತ್ಯ,ನಾಟಕ, ಕೋಲಾಟ ಮುಂತಾದವುಗಳು ಪ್ರೇಕ್ಷಕರ ಮನಸೂರಗೊಂಡವು.ಪರಶುರಾಮ ಹುಬ್ಬಳ್ಳಿ, ಸಿಕಂದರ ವಾಲೀಕಾರ, ಮಂಜುಳಾ ಜಾಧವ, ಮಲ್ಲಮ್ಮ ಗೌಡರ, ರಜನಿಕಾಂತ ಶಿಲ್ಪಿ, ಕುಮಾರೇಶ ತುಪ್ಪದ, ಶರಣಪ್ಪಗೌಡ ಕರಕನಗೌಡ್ರ, ಮಂಜುನಾಥ ಗೌಡರ, ರುದ್ರಯ್ಯ ಹಿರೇಮಠ ಮುಂತಾದವರಿದ್ದರು.
ಸಂದೀಪ ಹೂಗಾರ, ಕುಮಾರೇಶ ಹಿರೇಮಠ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಸಿದ್ಧಲಿಂಗೇಶ ಕರ್ಜಿಗನೂರ ವರದಿ ವಾಚಿಸಿದರು. ಎ.ಬಿ. ಸೊನ್ನದ ಸ್ವಾಗತಿಸಿದರು. ವಿ.ಎಂ. ವಾಲ್ಮಿಕಿ ಪರಿಚಯಿಸಿದರು.ರೇಣುಕಾ ಪಾಟೀಲ ನಿರೂಪಿಸಿದರು. ಎ.ಎಸ್. ಮುನೇನಕೊಪ್ಪ ವಂದಿಸಿದರು.