ಸಾರಾಂಶ
ಸಂತ ಸೇವಾಲಾಲ್ ಮಹಾರಾಜರ ಜಯಂತಿ
ಕನ್ನಡಪ್ರಭ ವಾರ್ತೆ ಶಿಕಾರಿಪುರಸಂತ ಸೇವಾಲಾಲ್ ಮಹಾರಾಜರು ಅವತಾರ ಪುರುಷರಾಗಿದ್ದು, ಶಿಕ್ಷಣದಿಂದ ಮಾತ್ರ ಸಮುದಾಯದ ಅಭಿವೃದ್ದಿ ಸಾದ್ಯ ಎಂಬುದನ್ನು ಅರಿತು ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದರು ಎಂದು ಇಲ್ಲಿನ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ರವಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಬಂಜಾರ ಸಮಾಜದ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಂಜಾರ ಸಮಾಜ ಹರಪ್ಪ ಸಂಸ್ಕೃತಿ ರೀತಿ ಅತ್ಯಂತ ಪುರಾತನ, ವಿಶಿಷ್ಟ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಬಂಜಾರ ಸಮಾಜ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು,ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಗೆರಿಲ್ಲಾ ಯುದ್ದ ತಂತ್ರಗಾರಿಕೆಯಲ್ಲಿ ಬಂಜಾರ ಸಮಾಜದ ಪಾತ್ರವಿದೆ. ಬಂಜಾರ ಸಮುದಾಯದ ಸಂತ ಸೇವಾಲಾಲ್ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ, ಅವರು ನಾಯಕರಾಗಿದ್ದರು. ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ್ದರು. ಸಮಾನತೆಯ ಬದುಕಿಗೆ ದಾರಿ ತೋರಿಸಿದ್ದ ಸಂತ ಸೇವಾಲಾಲ್ ಅವತಾರ ಪುರುಷರಾಗಿದ್ದರು. ಸಮಾಜದ ಜನರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ್ದರು ಎಂದು ಶ್ಲಾಘಿಸಿದ ಆವರು, ಬಂಜಾರ ಸಮಾಜ ಬಾಂಧವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಭದ್ರಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎನ್.ಕುಮಾರ್ ಮಾತನಾಡಿ, ಸಂತ ಸೇವಲಾಲ್ ಮಹಾನ್ ದಾರ್ಶನಿಕರಾಗಿದ್ದರು. ಅವರ ಆದರ್ಶ ತತ್ವಗಳನ್ನು ನಾವೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ತಾ.ಪಂಚಾಯಿತಿ ಇಒ ನಾಗರಾಜ್, ಸಹಾಯಕ ಕೃಷಿ ನಿರ್ದೇಶಕ ಕಿರಣಕುಮಾರ್ ಹರ್ತಿ, ಸಮಾಜ ಕಲ್ಯಾಣಾಧಿಕಾರಿ ಮದುಸೂಧನ, ತಾಲೂಕು ಬಂಜಾರದ ಸಮಾಜ ಅಧ್ಯಕ್ಷ ಕುಮಾರನಾಯ್ಕ ಮರಡಿ ತಾಂಡ, ಮಹಮಠ ಸಮಿತಿ ನಿರ್ದೇಶಕ ವಿಜಯನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಗಾರಿನಾಯ್ಕ, ಮುಖಂಡ ಬಸವರಾಜನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಗ್ರಾಮಗಳ ಬಂಜಾರ ಸಮಾಜದ ಮುಖಂಡರು ಹಾಜರಿದ್ದರು.