ಸಾರಾಂಶ
ಹಾವೇರಿ: ಕಣ್ಣು ಪ್ರತಿ ವ್ಯಕ್ತಿ, ಪ್ರಾಣಿಯ ಬದುಕಿನ ಬೆಳಕು. ಕಣ್ಣಿಲ್ಲದವರ ತೊಂದರೆ ಕಲ್ಪನೆ ಕೂಡ ಕಷ್ಟಕರ. ಕಾರಣ ಕಣ್ಣಿನ ಆರೋಗ್ಯವನ್ನು ಪ್ರತಿ ವ್ಯಕ್ತಿ ಮುತುವರ್ಜಿಯಿಂದ ನೋಡಿಕೊಳ್ಳಬೇಕು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಲಯನ್ಸ್ ಕ್ಲಬ್, ಕಂಚಿಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಆಶ್ರಯದಲ್ಲಿ ಹುಕ್ಕೇರಿಮಠದ ಆವರಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಲಯನ್ಸ್ ಸಂಸ್ಥೆ ಈ ಶಿಬಿರವನ್ನು ಬಹುದಿನಗಳಿಂದ ನಡೆಸುತ್ತಿರುವುದು ಅವರಲ್ಲಿನ ಸಾಮಾಜಿಕ ಕಳಕಳಿಗೆ ಸಾಕ್ಷಿ ಎಂದು ಸಂಸ್ಥೆಯ ಧ್ಯೇಯ ಮತ್ತು ಅದರ ಪದಾಧಿಕಾರಿಗಳ ಪರೋಪಕಾರ ಗುಣಗಳನ್ನು ಶ್ಲಾಘಿಸಿದರು.ಉಚಿತ ನೇತ್ರ ಪರೀಕ್ಷೆಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನಕ್ಕೆ ಸುಮಾರು 230ಕ್ಕೂ ಹೆಚ್ಚು ಜನರು ಈ ನೇತ್ರ ಪರೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ನೇತ್ರಗಳ ಕುರಿತು ಕಾಳಜಿಯನ್ನು ತೋರ್ಪಡಿಸಿದರು. ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಪರೀಕ್ಷಿಸಿ ಈ ಪೈಕಿ ಸುಮಾರು 110ಜನರನ್ನು ಉಚಿತ ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ.ಲಯನ್ಸ್ ಸಂಸ್ಥೆ ಅಧ್ಯಕ್ಷ ಸುಭಾಸ್ ಹುಲ್ಯಾಳದ ಮಾತನಾಡಿ, ಕಳೆದ 3 ಕ್ಯಾಂಪ್‌ಗಳಿಗಿಂತ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದು, ಅವರ ಕಣ್ಣಿನ ಸಮಸ್ಯೆಗಳ ಕುರಿತು ನೇತ್ರ ತಜ್ಞರ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆ. ಈಗಾಗಲೇ ಈ ಶಿಬಿರದಲ್ಲಿ 110 ಜನರನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಉಚಿತ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿದ್ದು, ಅವರನ್ನು ನಿಗದಿತ ದಿನದಂದು ಆಸ್ಪತ್ರೆಯ ವಾಹನದಲ್ಲಿಯೇ ಶಿವಮೊಗ್ಗಕ್ಕೆ ಕರೆದೊಯ್ದು ಅಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಿ ಪುನಃ ವಾಪಸ್ ಇಲ್ಲಿಗೆ ಕರೆತಂದು ಬಿಡಲಾಗುತ್ತದೆ. ಅಲ್ಲದೇ ನಂತರದ ನಿಗದಿತ ದಿನದಂದು ಪುನರ್ ತಪಾಸಣೆಗೆ ಬಂದು ಶಸ್ತ್ರಚಿಕಿತ್ಸೆಯ ನಂತರ ಫಲಿತಾಂಶ ಪರೀಕ್ಷೆಗೊಳಪಡಬೇಕೆಂದು ಶಸ್ತ್ರ ಚಿಕಿತ್ಸೆಗೆ ಒಳಗಾದವರಲ್ಲಿ ಮನವಿ ಮಾಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಲಯನ್ಸ್ ಸಂಸ್ಥೆ ಗ್ರಾಮೀಣ ಭಾಗಗಳಲ್ಲಿ ಇದೇ ಮಾದರಿಯ ಉಚಿತ ನೇತ್ರ ತಪಾಸಣೆ ಮಾತ್ರವಲ್ಲ, ಶುಗರ್, ಬಿ.ಪಿ. ಸೇರಿದಂತೆ ಕೆಲ ನಿಗದಿತ ಆರೋಗ್ಯ ಸಮಸ್ಯೆಗಳ ತಪಾಸಣೆ ಮತ್ತು ಅವುಗಳ ಚಿಕಿತ್ಸೆ ಕುರಿತು ಮಾಹಿತಿ ಶಿಬಿರ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ವಿರುಪಾಕ್ಷಪ್ಪ ಹಾವನೂರ, ಖಜಾಂಚಿ ಗಿರೀಶ ಬಣಕಾರ, ಶಿವಬಸಪ್ಪ ಮುಷ್ಠಿ, ಮಹಾಂತೇಶ ಮಳಿಮಠ, ಪಿ.ಸಿ. ಹಿರೇಮಠ, ಎ.ಎಚ್. ಕಬ್ಬಿಣಕಂತಿಮಠ, ಎಸ್.ಆರ್. ಮಾಗನೂರ, ಆರ್.ಎಸ್. ಮಾಗನೂರ, ಆನಂದ ಅಟವಾಳಗಿ, ಸುಭಾಸ ಹುರಳಿಕುಪ್ಪಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))