ಹಾವೇರಿ: ಡಾ. ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಸಂಗ್ರಹ, ಸಂರಕ್ಷಣೆ ಹಾಗೂ ಪ್ರಸಾರಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ. ಕನ್ನಡ ಸಾಹಿತ್ಯ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯದ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಟಿ.ಎಂ.ಎ.ಇ.ಎಸ್. ಬಿಇಡಿ ಕಾಲೇಜು ಸಹಯೋಗದಲ್ಲಿ ಜರುಗಿದ ಡಾ. ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ವಚನಗಳು ಸೇರಿದಂತೆ ನೂರಾರು ಶರಣರ ವಚನಗಳನ್ನು ಊರೂರು ಸಂಚರಿಸಿ ಸಂಗ್ರಹಿಸಿ, ಸಂಪಾದಿಸಿ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಮಹನೀಯರು ಫ.ಗು. ಹಳಕಟ್ಟಿ. ಅವರ ಸೇವೆಯಿಂದಲೇ ವಚನ ಸಾಹಿತ್ಯ ಮುಂದಿನ ಪೀಳಿಗೆಗೆ ತಲುಪಲು ಸಾಧ್ಯವಾಯಿತು. ಬಸವಣ್ಣನವರ ತತ್ವ, ಆದರ್ಶ ಮತ್ತು ಜೀವನ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ಧಾರವಾಡ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಕೆ.ಎಸ್. ಕೋರಿಶೆಟ್ಟರ ಮಾತನಾಡಿ, ಕನಕದಾಸ, ಸರ್ವಜ್ಞ, ಸಂತ ಶಿಶುನಾಳ ಶರೀಫ, ವಿ.ಕೃ. ಗೋಕಾಕ, ಗಳಗನಾಥ ಸೇರಿದಂತೆ ಅನೇಕ ಮಹನೀಯರನ್ನು ನೀಡಿದ ನೆಲ ಹಾವೇರಿ ಜಿಲ್ಲೆ ಎಂದು ಬಣ್ಣಿಸಿದರು.

ಸರ್ಕಾರವು ಫ.ಗು. ಹಳಕಟ್ಟಿ ಅವರ ಜಯಂತಿಯನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವಾಗಿ ಆಚರಿಸುತ್ತಿರುವುದು ಶ್ಲಾಘನೀಯ. ವಚನ ಸಾಹಿತ್ಯವು ಕೇವಲ ಅನುವಾದ ಸಾಹಿತ್ಯವಲ್ಲ, ಅದು ಕಾಯಕಜೀವಿಗಳ ಅನುಭಾವ ಸಾಹಿತ್ಯವಾಗಿದೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಚಿಂತನಾ ವೇದಿಕೆಯಾಗಿದೆ. ಮಹಿಳೆಯರು ಹಾಗೂ ದಲಿತರಿಗೆ ಸಮಾನ ಅವಕಾಶ ಕಲ್ಪಿಸಿತ್ತು. ಸಮಾಜದ ಅಸಮಾನತೆ, ಶೋಷಣೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಪ್ರಕಟಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.


ಜಿಲ್ಲಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಕಾರ್ಯಕ್ರಮ ಉದ್ಘಾಟಿಸಿದರು. ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಟಿ.ಎಂ.ಎ.ಇ.ಎಸ್. ಬಿಇಡಿ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಸ್ವಾಮಿ ಪ್ರಸಾದಮಠ ಇತರರು ಇದ್ದರು.