ಸಾರಾಂಶ
ಬಸವನಬಾಗೇವಾಡಿ: ತಾಲೂಕಿನ ನಾಗರಾಳಹುಲಿ ಗ್ರಾಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಉಚ್ಛಾಟಿಸಿದ ಕ್ರಮ ಖಂಡಿಸಿ ಭಾನುವಾರ ಯತ್ನಾಳ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿ, ಅವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ ಮಾಡಿ, ಬೆಂಕಿ ಹಚ್ಚಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಮುಖಂಡ ಬಿ.ಎಸ್.ಪಾಟೀಲ ನಾಗರಾಳ ಹುಲಿ ಮಾತನಾಡಿ, ಹಿಂದುತ್ವವನ್ನೇ ಉಸಿರಾಗಿಸಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರು ಹಿಂದುಗಳು ಸಂಕಷ್ಟದಲ್ಲಿದ್ದಾಗ ಧೈರ್ಯ ತುಂಬುವ ಜೊತೆಗೆ ಅವರ ನೆರವಿಗೆ ನಿಲ್ಲುತ್ತಾರೆ. ಎಲ್ಲ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತಾರೆ. ಸದಾ ಅನ್ಯಾಯಕ್ಕೆ ಒಳಗಾಗಿರುವ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿಯೂ ದಿಟ್ಟತನದಿಂದ ಧ್ವನಿ ಎತ್ತಿದ್ದಾರೆ. ಇದರಿಂದ ನಾಡಿನ ಜನರ ಮನದಲ್ಲಿ ಪ್ರಬಲ ನಾಯಕರಾಗಿದ್ದಾರೆ. ಅವರ ಏಳ್ಗೆ ಸಹಿಸದೇ ಅಪ್ಪ ಮಕ್ಕಳ ಕುತಂತ್ರದಿಂದ ಉಚ್ಛಾಟನೆ ಮಾಡಿರುವುದನ್ನು ತಕ್ಷಣ ಹೈಕಮಾಂಡ್ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ಏನೆಂಬುವುದನ್ನು ತೋರಿಸುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರಾಮನಗೌಡ ಪಾಟೀಲ, ಮಲ್ಲಣ್ಣ ಅವಟಿ, ಈರಣ್ಣ ಯಾಳವಾರ, ಪ್ರಕಾಶ ಬಾಬಣ್ಣವರ, ಕಲ್ಲನಗೌಡ ಬಿರಾದಾರ, ಸಂಗು ಚಿಮ್ಮಲಗಿ, ಶಂಕ್ರಪ್ಪ ಬೇವನೂರ ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.