ಸಾರಾಂಶ
ಮಹೂರ್ತ ಪಠಣದ ನಂತರ ತೆಪ್ಪಮಂಟಪದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರನ್ನು ಪ್ರತಿಷ್ಟಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರಥಮ ತೆಪ್ಪೋತ್ಸವ ಸೋಮವಾರ ರಾತ್ರಿ ಸಂಭ್ರಮದಿಂದ ನೆರವೇರಿತು. ಶ್ರೀವಿಶ್ವವಸು ಸಂವತ್ಸರದ ವೈರಮುಡಿ ಬ್ರಹ್ಮೋತ್ಸವಕ್ಕೆ ಪೂರ್ವಭಾವಿಯಾಗಿ ಕಲ್ಯಾಣಿಯಲ್ಲಿ ನಡೆದ ಚೆಲುವನ ಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.
ಪಾಂಡವಪುರ ಖಜಾನೆಯಿಂದ ತಂದ ಅಮೂಲ್ಯ ಮುತ್ತುಮುಡಿ ಮುತ್ತಗಳ ಹಾರಗಳೊಂದಿಗೆ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿ ಸಂಜೆ ವೈಭವದ ಉತ್ಸವ ನೆರವೇರಿಸಲಾಯಿತು. ಮಹೂರ್ತ ಪಠಣದ ನಂತರ ತೆಪ್ಪಮಂಟಪದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರನ್ನು ಪ್ರತಿಷ್ಟಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಲ್ಯಾಣಿಯಲ್ಲಿ ಮೂರು ಪ್ರದಕ್ಷಿಣೆಯೊಂದಿಗೆ ಪ್ರಥಮ ತೆಪ್ಪೋತ್ಸವ ರಾತ್ರಿ 8 ಗಂಟೆಗೆ ಮುಕ್ತಾಯವಾಯಿತು. ತೆಪ್ಪೋತ್ಸವದಂದು ವಿದ್ವಾನ್ ಆನಂದ್ ತಂಡ ನಾದಸ್ವರ ನುಡಿಸಿ ಉತ್ಸವಕ್ಕೆ ಮೆರಗು ನೀಡಿದರು.ತೆಪ್ಪೋತ್ಸವದ ಅಂಗವಾಗಿ ಕಲ್ಯಾಣಿಯಲ್ಲಿ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡುವ ಜೊತೆಗೆ ಸರಳ ದೀಪಾಲಂಕಾರ ಮಾಡಿದ್ದು ಭಕ್ತರಿಗೆ ಮುದ ನೀಡಿತ್ತು.