ಕನ್ನಡಪ್ರಭ ವಾರ್ತೆ ಇಂಡಿ

ಸಾಲಬಾಧೆ ತಾಳಲಾರದೇ ಮನನೊಂದು ರೈತರೊಬ್ಬರು ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.

ರೈತ ನಾಗಪ್ಪ ಭೀಮಶ್ಯಾ ಅಥರ್ಗಾ(57) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಟ್ರ್ಯಾಕ್ಟರ್ ಸಾಲವಾಗಿ ₹15 ಲಕ್ಷ , ತಡವಲಗಾ ಸಹಕಾರಿ ಸಂಘದಲ್ಲಿ ₹65 ಸಾವಿರ ಹಾಗೂ ಕೈಗಡವಾಗಿ ಸುಮಾರು ₹5 ಲಕ್ಷ ಸಾಲ ಮಾಡಿಕೊಂಡಿದ್ದರು. ರೈತ ನಾಗಪ್ಪನ ಹೆಸರಿನಲ್ಲಿ ತಡವಲಗಾ ಗ್ರಾಮದಲ್ಲಿ 1 ಎಕರೆ 17 ಗುಂಟೆ ಜಮೀನಿದ್ದು, ಗ್ರಾಮದ ಇತರ ರೈತರ ಜಮೀನು ಕೂಡ ವರ್ಷದ ಕರಾರಿನ ಮೇಲೆ ಮಾಡಿಕೊಂಡಿದ್ದ. ಸಾಲ ಮಾಡಿ ಕಬ್ಬು ಬೆಳೆ ನಾಟಿ ಮಾಡಿದ್ದು, ಮಳೆ ಕೊರತೆ ಕಾರಣ ಒಣಗಿರುವ ಕಬ್ಬು ಕಂಡು ಸಾಲ ತೀರಿಸುವುದು ಹೇಗೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ, ಮೂವರು ಪತ್ರರಿದ್ದಾರೆ. ಈ ಕುರಿತು ಹೊರ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.