ಕನ್ನಡಪ್ರಭ ವಾರ್ತೆ ಬೆಳಗಾವಿಉತ್ತಮ ಆದಾಯದ ನಿರೀಕ್ಷೆಯೊಂದಿಗೆ ಎಲೆಕೋಸು ಬೆಳೆ ಬೆಳೆದಿದ್ದ ರೈತರ ಬದುಕು ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಬೆಳಗಾವಿ ತಾಲೂಕಿನ ಕಡೋಲಿ, ಅಗಸಗಾ, ಬಂಬರಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಲೆಕೂಸು (ಕ್ಯಾಬೀಜ್‌) ಸೇರಿದಂತೆ ತರಕಾರಿ ಬೆಳೆ ಉತ್ತಮವಾಗಿ ಬಂದಿದ್ದರೂ, ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ತಕ್ಕಮಟ್ಟಿನ ಬೆಲೆಯೂ ಸಿಗದೇ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಬೆಲೆ ಇಲ್ಲದೆ ಬೆಳೆದ ಬೆಳೆಯನ್ನೇ ಹೊಲದಲ್ಲೇ ನಾಶಪಡಿಸುತ್ತಿದ್ದಾರೆ. ಗೋಳಾಡುತ್ತ ಫಸಲನ್ನು ನಾಶ ಮಾಡುವ ದೃಶ್ಯಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ.

ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ನಿರಂತರ ಬೆಲೆ ಅಸ್ಥಿರತೆ ಉಂಟಾಗುತ್ತಿದ್ದು, ರೈತರಲ್ಲಿ ಅನಿಶ್ಚಿತತೆ ಹೆಚ್ಚಿಸಿದೆ. ವ್ಯಾಪಾರಸ್ಥರು ಹೊಲಗಳಿಗೆ ಬಂದು ಒಂದು ದರ ನಿಗದಿ ಪಡಿಸಿದರೂ, ಮಾರುಕಟ್ಟೆಗೆ ಸಾಗುವ ಹೊತ್ತಿಗೆ ಆ ದರ ಕುಸಿಯುತ್ತದೆ. ಹಲವಾರು ಸಂದರ್ಭಗಳಲ್ಲಿ ಬೆಳೆ ತರಬೇಡಿ, ಹೊಲದಲ್ಲೇ ಬಿಡಿ ಎಂದು ವ್ಯಾಪಾರಸ್ಥರು ಸೂಚಿಸುವುದರಿಂದ ರೈತರಿಗೆ ಇನ್ನಷ್ಟು ನಷ್ಟ ಹೊಡೆತ ಬೀಳುತ್ತಿದೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಮೂಲಕ ಮಹಾರಾಷ್ಟ್ರ, ಗೋವಾ ಹಾಗೂ ಮಂಗಳೂರು ಭಾಗಗಳಿಗೆ ಸಾಗುವ ತರಕಾರಿ ಪೂರೈಕೆ ಇತ್ತೀಚೆಗೆ ಕುಂಠಿತವಾಗಿದೆ. ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಬೇಡಿಕೆ ಇಳಿಮುಖವಾಗಿರುವುದು, ಕೆಲವು ಹೋಟೆಲ್‌ಗಳು ಕಾರ್ಯಾಚರಣೆ ನಿಲ್ಲಿಸಿರುವುದು ಸೇರಿದಂತೆ ಹಲವು ಕಾರಣಗಳಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಒಂದು ಎಕರಿಗೆ ಕ್ಯಾಬೀಜ್‌ ಬೆಳೆ ಬೆಳೆಸಲು ಸುಮಾರು ₹50 ಸಾವಿರ ಕ್ಕೂ ಹೆಚ್ಚು ವೆಚ್ಚವಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ ರೈತರು ಸಾಲದ ಬಾಧೆಗೆ ಸಿಲುಕುವಂತಾಗಿದೆ. ವಿಶೇಷವಾಗಿ ಖಾಸಗಿ ಸಾಲ ಪಡೆದ ಸಣ್ಣ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ಕುಟುಂಬ ನಿರ್ವಹಣೆ ಕೂಡ ಕಷ್ಟಕರವಾಗಿದೆ.

ದಯಾಮರಣಕ್ಕೆ ಮನವಿ

ಬೆಲೆ ಕುಸಿತದಿಂದ ಸಾಲ ತೀರಿಸಲು ಸಾಧ್ಯವಾಗದೆ, ಕೆಲವು ರೈತರು ತೀವ್ರ ನಿರಾಶೆಗೆ ಒಳಗಾಗುತ್ತಿದ್ದಾರೆ. ಕುಟುಂಬವನ್ನು ಹೇಗೆ ನಡೆಸಬೇಕು? ಎಂಬ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವರು ದಯಾಮರಣಕ್ಕೂ ಮನವಿ ಮಾಡುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ. ತರಕಾರಿ ಬೆಳೆಗೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಸಣ್ಣ ರೈತರು ಹೆಚ್ಚು ಹೊಡೆತ ಅನುಭವಿಸುತ್ತಿದ್ದು, ದೊಡ್ಡ ರೈತರು ಮಾತ್ರ ಕಬ್ಬು ಬೆಳೆ ಮೂಲಕ ಸ್ವಲ್ಪ ಮಟ್ಟಿಗೆ ನಷ್ಟದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.ಇನ್ನು ಸಿಗದ ಶಾಶ್ವತ ಪರಿಹಾರ


ಕಳೆದ 25 ವರ್ಷಗಳಿಂದ ಸಮಸ್ಯೆ ಪರಿಹಾರಕ್ಕಾಗಿ ಮನವಿ ಮಾಡುತ್ತಿದ್ದೇವೆ. ಆದರೆ, ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಬೆಲೆ ಅಸ್ಥಿರತೆಯಿಂದ ಕೃಷಿ ಲಾಟರಿಯಂತಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಈ ಭಾಗದ ಸಣ್ಣ ರೈತರ ಬೆಳೆಗಳು ಹಾನಿಗೀಡಾಗುತ್ತಲೇ ಬಂದಿವೆ. ಇದರಿಂದಾಗಿ ರೈತರು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ತರಕಾರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ, ನಷ್ಟ ಪರಿಹಾರ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ನೇರ ಖರೀದಿ ವ್ಯವಸ್ಥೆ ಜಾರಿಗೆ ತರಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ರೈತರ ಸಂಕಷ್ಟ ದಿನೇದಿನೇ ಗಂಭೀರವಾಗುತ್ತಿದ್ದು, ಸರ್ಕಾರದ ತ್ವರಿತ ಹಸ್ತಕ್ಷೇಪ ಮಾಡಿ, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ.ಕೋಟ್‌......ಉತ್ತಮ ತರಕಾರಿ ಫಸಲು ಬಂದಿದ್ದರೂ ಸೂಕ್ತ ಬೆಲೆ ಇಲ್ಲ. ಇದರಿಂದ ನಮ್ಮ ಹೊಟ್ಟ್ಯಾಗ ಬೆಂಕಿ ಬೀಳುತ್ತಿದೆ. ನಮಗೂ ಹಾಗೂ ಮನೆ ಮಂದಿಗೆಲ್ಲರಿಗೂ ವಿಷ ಕೊಡಬೇಕು ಅನ್ನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ನಮಗೆ ದಯಾಮರಣಕ್ಕೆ ಅನುಮತಿ ಕೊಡಬೇಕು. ಸಣ್ಣ ರೈತರ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು.ಅಪ್ಪಾಸಾಹೇಬ ದೇಸಾಯಿ, ರೈತ ಮುಖಂಡ