ಕನ್ನಡಪ್ರಭ ವಾರ್ತೆ ಪಾಂಡವಪುರ
ಕೆಆರ್‌ಎಸ್ ಜಲಾಶಯದ ಅಚ್ಚುಕಟ್ಟಿನ ಎಲ್ಲಾ ನಾಲೆಗಳಿಗೆ ನೀರು ಹರಿಸುವಂತೆ, ಬಿಡದಿ ರೈತರ ಹೋರಾಟ ಬೆಂಬಲಿಸಿ ಪಾಂಡವಪುರ ಕೆ.ಆರ್.ಪೇಟೆ ಮುಖ್ಯರಸ್ತೆ ಸಂಚಾರ ತಡೆದು ಪಟ್ಟಣದಲ್ಲಿ ರೈತರು, ಸಂಘಟನೆಗಳ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಅನಂತರಾಮ್ ವೃತ್ತದಲ್ಲಿ ಸೇರಿದ ರೈತರು ರಾಜ್ಯ ಸರ್ಕಾರ, ಜಲ ಸಂಪನ್ಮೂಲ ಸಚಿವ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮಳೆ ಇಲ್ಲದೇ ಒಣಗುತ್ತಿರುವ ಬೆಳೆಗಳಿಗೆ ನೀರು ಒದಗಿಸಿ ರೈತರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ರೈತ ಬವಣೆ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಕಳೆದ ಒಂದು ವಾರದ ಹಿಂದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವುದಾಗಿ ತೀರ್ಮಾನ ಮಾಡಿದ್ದರು. ಆದರೆ, ಸಭೆ ತೀರ್ಮಾನದಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ ಎಂದರು.
ಜಲಸಂಪನ್ಮೂಲ ಸಚಿವರು ಕೆಆರ್‌ಎಸ್ 100 ಅಡಿ ತಲುಪಿದ ಬಳಿಕ ನಾಲೆಗಳಿಗೆ ನೀರು ಹರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲಿವರೆಗ ಬೆಳೆದ ಬೆಳೆಗಳು ಒಣಗಿ ರೈತ ಕಬ್ಬಿಗೆ ಬೆಂಕಿ ಹಾಕುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.
ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ ಇಡೀ ದೇಶ ನಾಶವಾಗುತ್ತದೆ. ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ ನಾಲೆಗಳಿಗೆ ನೀರು ಹರಿಸದೆ ಈ ಸರ್ಕಾರ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ನಾಲೆಗಳಿಗೆ ನೀರು ಹರಿಸದಿದ್ದರೆ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ತಮ್ಮ ಜಮೀನು ಉಳಿಸಿಕೊಳ್ಳಲು ಬಿಡದಿಯಲ್ಲಿ ರೈತರು ನ್ಯಾಯಯತ್ತ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ರೈತರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರೈತರ ಸಹಮತವಿಲ್ಲದೆ ಜಮೀನು ಸರ್ವೇ ಮಾಡಲಾಗುತ್ತಿದೆ. ರೈತರು ನ್ಯಾಯ ಕೇಳಬಾರದು ಎಂಬುದು ಈ ಸರ್ಕಾರದ ಮನಸ್ಥಿತಿಯಾಗಿದೆ. ರೈತರ ತಾಳ್ಮೆಗೂ ಒಂದು ಮೀತಿ ಇದೆ ಎಂದು ಎಚ್ಚರಿಸಿದರು.ಪ್ರತಿಭಟನೆ ಬಳಿಕ ಎಇ ಕುಮಾಸ್ವಾಮಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಿರೋಡೆ ಕೆರೆ ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಚನ್ನಕೇಶವ, ಗೃಹನಿರ್ಮಾಣ ಮಂಡಳಿ ನಿರ್ದೇಶಕ ಭಾಸ್ಕರ್, ಗ್ರಾಪಂ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ಶಂಕರ್, ನಾಗೇಶ್, ಬೆಟ್ಟೇಗೌಡ ಸೇರಿದಂತೆ ಹಲವರು ಇದ್ದರು.