ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಇತ್ತೀಚೆಗೆ ಅಕಾಲಿಕ ಮಳೆ-ಬಿರುಗಾಳಿಯಿಂದಾಗಿ ಮುಂಗಾರು ಹಂಗಾಮಿನ ಕಟಾವು ಹಂತದಲ್ಲಿದ್ದ ಭತ್ತ ಮಕಾಡೆ ಮಲಗಿತ್ತು. ರೈತರ ಸಂಕಷ್ಟ ಮನಗಂಡು ಜಿಲ್ಲಾಡಳಿತ ಬೆಳೆಹಾನಿ ಸಮೀಕ್ಷೆ ಸೂಚಿಸಿದರೂ ಸಮರ್ಪಕವಾಗಿಲ್ಲ. ಇದರಿಂದ ಹುಣಸಗಿ, ಸುರಪುರ ತಾಲೂಕಿನ ರೈತರು ವಂಚಿತರಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳು ಕಂದಾಯ ಮತ್ತು ಕೃಷಿ ಅಧಿಕಾರಿಗಳಿಗೆ ಬೆಳೆ ಹಾನಿ ಸಮೀಕ್ಷೆ ವರದಿಯನ್ನು ಯಾವೊಬ್ಬ ರೈತನಿಗೂ ಅನ್ಯಾಯವಾಗದಂತೆ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು. ನ.21 ಕೊನೆಯ ದಿನ ಎಂಬುದಾಗಿ ಗಡುವೂ ನೀಡಲಾಗಿತ್ತು. ಆದರೂ ಬೆಳೆಹಾನಿ ಸಮೀಕ್ಷೆ ಅವಳಿ ತಾಲೂಕಿನಲ್ಲಿ ಸಮರ್ಪಕವಾಗಿ ನಡೆಯದೇ ಕೃಷಿ ಮತ್ತು ಕಂದಾಯ ಅಧಿಕಾರಿಗಳು ವರದಿ ಸಲ್ಲಿಸುವ ಸಿದ್ಧತೆಯಲ್ಲಿರುವುದು ರೈತರಲ್ಲಿ ಆಂತಕ ಮೂಡಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಪುರ ತಾಲೂಕಿನಲ್ಲಿ 35,036 ಹೆಕ್ಟೇರ್ ಭತ್ತ ಬಿತ್ತನೆ ಗುರಿ ಹೊಂದಿದ್ದು, 34,308 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಹುಣಸಗಿ ತಾಲೂಕಿನಲ್ಲಿ 25,665 ಹೆಕ್ಟೇರ್ ಭತ್ತ ಬಿತ್ತನೆ ಗುರಿ ಹೊಂದಲಾಗಿತ್ತು. 25,495 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ದೀಪಾವಳಿ ಮುಗಿಯುತ್ತಿದ್ದಂತೆ ಭತ್ತದ ಕಟಾವಿನ ಸಿದ್ಧತೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆ ಮತ್ತು ಬಿರುಗಾಳಿ ಮಾರಕವಾಗಿ ಎರಗಿತು. ನಳನಳಿಸುತ್ತಿದ್ದ ಭತ್ತ ಮಕಾಡೆ ಮಲಗಿತು. ಇದರಿಂದ ಹಸಿರುಗಟ್ಟಿದ್ದ ಕಾಯಿಗಳು ಎಲ್ಲಿ ಜೊಳ್ಳಾಗುತ್ತವೆ ಎಂಬ ಚಿಂತನೆಯಲ್ಲಿ ರೈತರು ಮುಳಗಿ ಹೋಗಿದ್ದಾರೆ. * ಶೂನ್ಯ ಪ್ರಚಾರ:ನೆಲಕ್ಕುರಳಿದ ಬೆಳೆ ಹಾನಿ ಸಮೀಕ್ಷೆ ಮಾಡಲು ಪ್ರತಿ ಹಳ್ಳಿಯಲ್ಲೂ ಕಂದಾಯ ಮತ್ತು ಕೃಷಿ ಇಲಾಖೆಗಳು ಜಂಟಿಯಾಗಿ ಡಂಗೂರ ಮತ್ತು ಧ್ವನಿವರ್ಧಕದ ಮೂಲಕ ಪ್ರಚುರು ಪಡಿಸುವಂತೆ ಮೌಖಿಕವಾಗಿ ಸಭೆಯಲ್ಲಿ ಹೇಳಲಾಗಿತ್ತು. ಆದರೂ ಸುರಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಡಂಗೂರ ಹಾಕಿಸದೆ ಶೂನ್ಯ ಸಾಧನೆ ಮಾಡಿದ್ದಾರೆ.* ಡಿಸಿ ಹೇಳಿಕೆಗೂ ಕಿಮ್ಮತ್ತಿಲ್ಲ:
ಬೆಳೆಹಾನಿ ಸಮೀಕ್ಷೆಯನ್ನು ಸರಿಯಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸುರಪುರ ವ್ಯಾಪ್ತಿಯ ಸತ್ಯಂಪೇಟೆಗೆ ಬಂದಾಗ ಅಧಿಕಾರಿಗಳಿಗೆ ಮೌಖಿಕ ಆದೇಶ ಮಾಡಿದ್ದರು. ಆದರೆ ಸುರಪುರ ಮತ್ತು ಹುಣಸಗಿ ತಾಲೂಕಿನ ಕಂದಾಯ ಮತ್ತು ಕೃಷಿ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತಿ ನೀಡಿಲ್ಲ ಎಂದು ರೈತ ಸಂಘಟನೆಯ ಮುಖಂಡ ವೆಂಕಟೇಶ ಕುಪಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.* ಅವಸರದಲ್ಲಿ ಬೆಳೆ ಕಟಾವ್:ನೆಲಕ್ಕೆ ಬಿದ್ದ ಭತ್ತ ಹಾನಿಯನ್ನು ಸಮೀಕ್ಷೆ ಮಾಡಲು ಯಾವೊಬ್ಬ ಅಧಿಕಾರಗಳು ಬರಲಿಲ್ಲ. ಮತ್ತೆ ಮಳೆ ಬಂದರೆ ಇರುವ ಭತ್ತ ಕೈಗೆ ಸಿಗುವುದಿಲ್ಲ ಎಂದು ಹೆದರೆ ಬೆಳೆ ಕಟಾವ್ ಮಾಡಿಸಿದ್ದೇವೆ. ಹಾಗಾದರೆ ಕಟಾವ್ ಆದ ಬೆಳೆಯ ಹಾನಿಯನ್ನು ಕೊಡುವವರು ಯಾರೆಂದು ವಾಗಣಗೇರಿ ರೈತ ಬೈಲಪ್ಪಗೌಡ ಪ್ರಶ್ನಿಸಿದ್ದಾರೆ. ಶೆಳ್ಳಗಿ ಗ್ರಾಮದಲ್ಲಿ ಕೆಲವು ಜಮೀನುಗಳಲ್ಲಿದ್ದ ಭತ್ತ ಪ್ರವಾಹ ಮತ್ತು ಮಳೆಯಿಂದ ಹಾನಿಯಾಗಿದೆ. ಈ ಕುರಿತು ಸಮೀಕ್ಷೆ ಮಾಡಿದ್ದು, ಆದರೆ, ನನ್ನ ಹೆಸರು ದಾಖಲೆಗಳಲ್ಲಿ ನಮೂದಾಗಿರುವುದಿಲ್ಲ. ನಾನು ಸಾಲ ಸೋಲ ಮಾಡಿ ಬಿತ್ತಿದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದೇನೆ. ನಮ್ಮ ಕುಟುಂಬವು ಈ ಜಮೀನನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಸರ್ಕಾರ ಕೈಬಿಟ್ಟರೆ ನಮಗೆ ಯಾರು ಗತಿ ಎಂಬುದು ರೈತರ ಅಳಲಾಗಿದೆ. ಹುಣಸಗಿ ಮತ್ತು ಸುರಪುರ ತಾಲೂಕಿನ ಬೆಳೆ ಹಾನಿ ರೈತರಿಗೆ ಜಿಲ್ಲಾಧಿಕಾರಿಗಳು ನ್ಯಾಯ ಒದಗಿಸಿಕೊಡುವರೇ ಎಂಬುದನ್ನು ಕಾಯ್ದು ನೋಡಬೇಕಿದೆ.
ಸುರಪುರ ಹೋಬಳಿಯ ಶೆಳ್ಳಗಿ ಗ್ರಾಮದ ಸೀಮಾಂತರದಲ್ಲಿ ಬರುವ ಸರ್ವೇ ನಂ. 103/5ರಲ್ಲಿರುವ 4.12 ಎಕರೆಯಲ್ಲಿ ಭತ್ತ ಬೆಳೆದಿದ್ದೇನೆ. 2024-25ನೇ ಸಾಲಿನಲ್ಲಿ ಪ್ರವಾಹದಿಂದ ನನ್ನ ಜಮೀನಿನಲ್ಲಿ ಬಿತ್ತಿದ ಭತ್ತದ ಬೆಳೆ ಸಂಪೂರ್ಣ ಹಾನಿಯಾಗಿದೆ. ಸರ್ಕಾರದಿಂದ ಬೆಳೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ರೈತ ಸಂಘಟನೆಯಿಂದ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರಿಗೆ ಮನವಿ ನೀಡುತ್ತೇವೆ.ಮಲ್ಲಿಕಾರ್ಜುನ ಅಮರಪ್ಪ ಸುರಪುರ
ಭತ್ತಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ರೈತರ ಹೊಲಗದ್ದೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಕೆಳ ಹಂತದ ಅಧಿಕಾರಿಗಳು ತಮ್ಮ ಕೆಲಸವನ್ನು ರೈತರ ಮೇಲೆ ಹೇರಿ ನ.21ಕ್ಕೆ ಸಮೀಕ್ಷೆ ಮುಕ್ತಾಯಗೊಳಿಸುತ್ತಿರುವುದು ರೈತನಿಗೆ ಮಾಡುವ ಘೋರ ಅನ್ಯಾಯ. ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಮಧ್ಯಪ್ರವೇಶಿಸಿ, ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಿ ಮಾಹಿತಿಯನ್ನು ಮತ್ತೊಮ್ಮೆ ನೀಡಿದ ನಂತರವೇ ಸರ್ವೇ ಕಾರ್ಯ ಮುಕ್ತಾಯಗೊಳಿಸಬೇಕು.ಮಲ್ಲಿಕಾರ್ಜುನ ಸತ್ಯಂಪೇಟೆ ರೈತಸಂಘದ ರಾಜ್ಯ ಉಪಾಧ್ಯಕ್ಷ