ಮುಚ್ಚಿರುವ ರಸ್ತೆ ತೆರವು, ರೈತರ ದಾಖಲೆಗಳ ಸಂರಕ್ಷಣೆಗಾಗಿ ತಹಸೀಲ್ದಾರ್ ಮನವಿ ಸಲ್ಲಿಕೆ

| Published : Nov 22 2024, 01:15 AM IST

ಮುಚ್ಚಿರುವ ರಸ್ತೆ ತೆರವು, ರೈತರ ದಾಖಲೆಗಳ ಸಂರಕ್ಷಣೆಗಾಗಿ ತಹಸೀಲ್ದಾರ್ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯ ನೆಪವೊಡ್ಡಿ ಈ ಹಿಂದಿನ ತಹಸೀಲ್ದಾರ್ ನಿಸರ್ಗಪ್ರಿಯ ಹಳೆ ರಸ್ತೆ ಮುಚ್ಚಿ, ಕಾಲೇಜು ಮತ್ತು ಬಸ್ ಡಿಪೋ ಪಕ್ಕಕ್ಕೆ ಹೊಂದಿಕೊಂಡಂತೆ ಹೊಸ ರಸ್ತೆಗೆ ಜಾಗ ಗುರುತಿಸಿ ಸರ್ವೇಗೆ ಸ್ಕೆಚ್ ಮಾಡಿ ಪ್ರಾಂಶುಪಾಲರಿಗೆ ಸಲ್ಲಿಸಿದ್ದಾರೆ. ಆದರೆ, ಕಳೆದ 6 ತಿಂಗಳಿಂದ ಹೊಸ ರಸ್ತೆ ಸಂಪರ್ಕ ಕಲ್ಪಿಸುವತ್ತ ಯಾವುದೇ ಬೆಳವಣಿಗೆ ಆಗಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ರಸ್ತೆ ತೆರವು, ಉಪ ನೋಂದಣಾಧಿಕಾರಿ ಶಿಥಿಲ ಕಟ್ಟಡದಲ್ಲಿರುವ ರೈತರ ದಾಖಲೆಗಳ ಸಂರಕ್ಷಣೆಗೆ ಆಗ್ರಹಿಸಿ ತಾಲೂಕು ರೈತಸಂಘ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರಿಗೆ ಮನವಿ ಸಲ್ಲಿಸಿತು.

ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದ ರೈತರು ಮನವಿ ಸಲ್ಲಿಸಿ ಮಾತನಾಡಿ, ಸರ್ಕಾರಿ ಪಾಲಿಟೆಕ್ನಿಕ್ ಆವರಣದ ಹಿಂಭಾಗ ನೂರಾರು ರೈತರ ಕೃಷಿ ಜಮೀನು ಇದೆ. ಈ ಹಿಂದೆ ಇದ್ದ ರಸ್ತೆ ಮುಚ್ಚಿದ್ದು, ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯ ನೆಪವೊಡ್ಡಿ ಈ ಹಿಂದಿನ ತಹಸೀಲ್ದಾರ್ ನಿಸರ್ಗಪ್ರಿಯ ಹಳೆ ರಸ್ತೆ ಮುಚ್ಚಿ, ಕಾಲೇಜು ಮತ್ತು ಬಸ್ ಡಿಪೋ ಪಕ್ಕಕ್ಕೆ ಹೊಂದಿಕೊಂಡಂತೆ ಹೊಸ ರಸ್ತೆಗೆ ಜಾಗ ಗುರುತಿಸಿ ಸರ್ವೇಗೆ ಸ್ಕೆಚ್ ಮಾಡಿ ಪ್ರಾಂಶುಪಾಲರಿಗೆ ಸಲ್ಲಿಸಿದ್ದಾರೆ. ಆದರೆ, ಕಳೆದ 6 ತಿಂಗಳಿಂದ ಹೊಸ ರಸ್ತೆ ಸಂಪರ್ಕ ಕಲ್ಪಿಸುವತ್ತ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಕಿಡಿಕಾರಿದರು.

ಸಾರ್ವಜನಿಕ ರಸ್ತೆ ಮುಚ್ಚಿದ್ದರಿಂದ ಸತ್ತವರ ಅಂತ್ಯ ಸಂಸ್ಕಾರ ಮಾಡಲು ನಾಲ್ಕಾರು ಕಿಮೀ ಸುತ್ತಿ ಬರಬೇಕಿದೆ. ಹೊಸ ರಸ್ತೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗ ರಸ್ತೆ ಸಮಸ್ಯೆ ಪರಿಹರಿಸದಿದ್ದರೆ ರೈತಸಂಘ ಹೋರಾಟಕ್ಕಿಯಲಿದೆ ಎಂದು ಎಚ್ಚರಿಸಿದರು.

ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿ ಹಳೆ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ರೈತರ ನೂರಾರು ವರ್ಷಗಳ ಹಳೆಯ ದಾಖಲೆಗಳು ಕಟ್ಟಡದಲ್ಲಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ದಾಖಲೆಗಳು ಹಾಳಾಗುತ್ತಿವೆ. ಅವುಗಳನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದರೂ ಸೂಕ್ತ ನಿವೇಶನದ ಕೊರತೆಯಿಂದ ಎದುರಾಗಿದೆ. ಸೂಕ್ತ ನಿವೇಶನದ ವ್ಯವಸ್ಥೆ ಮಾಡಿ ರೈತರ ದಾಖಲೆಗಳ ಸಂರಕ್ಷಣೆಗೆ ಕ್ರಮ ವಹಿಸುವಂತೆ ರೈತರ ನಿಯೋಗ ಒತ್ತಾಯಿಸಿತು.

ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ, ಪಾಲಿಟೆಕ್ನಿಕ್ ಆವರಣದಲ್ಲಿ ರಸ್ತೆ ಬಿಡಿಸುವ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ತಕ್ಷಣವೇ ಪ್ರಾಂಶುಪಾಲರಿಗೆ ಪತ್ರ ಬರೆದು ಸರ್ವೇ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ರಸ್ತೆ ಬಿಡಿಸಲು ಕ್ರಮ ವಹಿಸುತ್ತೇನೆ. ಉಪ ನೋಂದಣಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಅಗತ್ಯ ಜಾಗ ಗುರುತಿಸಿಕೊಡುವುದಾಗಿ ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಸೇರಿದಂತೆ ಹಲವರಿದ್ದರು.