ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸಲು ಒತ್ತಾಯ
ಕನ್ನಡಪ್ರಭ ವಾರ್ತೆ ಬಂಗಾರಪೇಟೆಕೃಷಿ ಚಟುವಟಿಕೆಗಳಿಗೆ ವಿದ್ಯುತ್ ನಿರಂತರವಾಗಿ ಕೈಕೊಡುತ್ತಿರುವುದರಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೆ ಅನ್ನದಾತರು ಅತಂತ್ರ ಸ್ಥಿತಿಯಲ್ಲಿರುವಂತಾಗಿದೆ ಎಂದು ಅಸಮಾಧಾನಗೊಂಡು ರೈತರು ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ನೂರಾರು ರೈತರು ಕಳೆದ ಹಲವು ದಿನಗಳಿಂದ ತಾಲೂಕಿನಾದ್ಯಂತ ವಿದ್ಯುತ್ ನಿಗದಿಯಂತೆ ಪೂರೈಕೆಯಾಗದೆ ನಿರಂತರವಾಗಿ ಕೈಕೊಡುವ ಮೂಲಕ ರೈತರು ಕೃಷಿಯತ್ತ ಮುಖ ಮಾಡದಂತೆ ಮಾಡಲಾಗಿದೆ. ದಿನಕ್ಕೆ ಕೇವಲ ಎರಡು ಗಂಟೆ ಕೃಷಿಗೆ ವಿದ್ಯುತ್ ನೀಡಲಾಗುತ್ತಿದೆ ಅದೂ ಇಪ್ಪತ್ತು ಬಾರಿ ಕಡಿತವಾಗುತ್ತಿದೆ,ಹೀಗಾದರೆ ನಾವು ಬೇಸಾಯ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.ಕೃಷಿ ನಂಬಿ ಜೀವನ ನಡೆಸುವ ನಮಗೆ ವಿದ್ಯುತ್ ಇಲ್ಲದೆ ದೊಡ್ಡ ಸಮಸ್ಯೆಯಾಗಿದೆ. ಯಾವ ಕಾಲದಲ್ಲಿಯೂ ಸಮರ್ಪಕವಾಗಿ ವಿದ್ಯುತ್ ಕೊಡುವುದಿಲ್ಲ. ಒಂದಲ್ಲಾ ಒಂದು ರೀತಿ ಸಬೂಬುಗಳನ್ನು ಹೇಳಿ ಕಡಿತ ಮಾಡಲಾಗುತ್ತಿದೆ. ಲಕ್ಷಾಂತರ ರು. ಖರ್ಚು ಮಾಡಿ ಬೆಳೆ ಹಾಕಲಾಗಿದೆ. ಆದರೆ ಬೆಳೆಗಳಿಗೆ ನೀರು ಕಟ್ಟಲು ಕೊಳವೆ ಬಾವಿಗಳಿಂದ ನೀರೆತ್ತಲು ವಿದ್ಯುತ್ ಇಲ್ಲದೆ ಬೆಳೆಗಳು ಕಣ್ಣಮುಂದೆಯೇ ಒಣಗಲಾರಂಬಿಸಿದೆ, ಇದರಿಂದ ನಮಗೆ ನಷ್ಟವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸಮರ್ಪಕವಾದ ಉತ್ತರ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಬೆಳೆಗಳಿಗೆ ವಿದ್ಯುತ್ ನೀಡುವವರೆಗೂ ಪ್ರತಿಭಟನೆ ಕೈಬಿಡಲ್ಲವೆಂದು ಪಟ್ಟುಹಿಡಿದರು. ಇದರಿಂದ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಚೇರಿ ಒಳಗೆ ಹೋಗಿ ಕೆಲಸ ಮಾಡಲು ಆಗದೆ ಪರದಾಡಿದರು.
ನಂತರ ಪ್ರತಿಭಟನಾಕಾರರ ವಿರುದ್ಧ ಅಧಿಕಾರಿಗಳು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಧಮ್ಕಿ ಹಾಕಿ ಚದುರಿಸಲು ಮುಂದಾದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. ನಂತರ ರೈತರ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರಿಂದ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯ ನೇತೃತ್ವವನ್ನು ತಿಮ್ಮಾಪುರ ಕೃಷ್ಣಮೂರ್ತಿ,ಎಸ್.ಶ್ರೀನಿವಾಸಗೌಡ ಇತರರುವಹಿಸಿದ್ದರು.