ಕನ್ನಡಪ್ರಭ ವಾರ್ತೆ ರಾಮನಗರ:
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಭಾನುವಾರ ಮರಗಳನ್ನು ತಬ್ಬಿಕೊಂಡು ಅಪ್ಪಿಕೋ ಚಳವಳಿ ನಡೆಸಿದರು.ಬೈರಮಂಗಲ ವೃತ್ತದಿಂದ ಬನ್ನಿಗಿರಿ ಗ್ರಾಮದವರೆಗೆ ಮೆರವಣಿಗೆ ನಡೆಸಿದ ರೈತರು, ತೋಟದಲ್ಲಿ ತೆಂಗು, ಅಡಿಕೆ ಮರಗಳನ್ನು ತಬ್ಬಿಕೊಂಡು ಅಪ್ಪಿಕೋ ಚಳವಳಿ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪುಟ್ಟ ಮಕ್ಕಳು ಕೂಡ ಮರಗಳನ್ನು ತಬ್ಬಿಕೊಂಡು ಕಡಿಯಲು ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿದರು.
ಬನ್ನಿಗಿರಿ ಗ್ರಾಮದ ತೋಟದಲ್ಲಿ ಕಲ್ಪವೃಕ್ಷಕ್ಕೆ ಪೂಜೆ ಸಲ್ಲಿಸಿದ ರೈತ ಮಹಿಳೆಯರು, ಮಕ್ಕಳಂತೆ ಮರಗಳನ್ನು ಬೆಳೆಸಿದ್ದೀವಿ, ಕಡಿಯಲು ಬಿಡುವುದಿಲ್ಲ. ಯೋಜನೆ ವ್ಯಾಪ್ತಿಯ 15 ಲಕ್ಷಕ್ಕೂ ಹೆಚ್ಚು ಮರಗಳನ್ನು ಉಳಿಸಿ ಎಂದು ಒತ್ತಾಯಿಸಿದರು.ಪ್ರಕೃತಿ ನಮ್ಮದು, ಭವಿಷ್ಯ ನಮ್ಮದು, ಹಸಿರೇ ಉಸಿರು, ಮರಗಳನ್ನು ರಕ್ಷಿಸಿ, ಪ್ರಕೃತಿ ನಮ್ಮ ತಾಯಿ, ಅಭಿವೃದ್ಧಿ ಹೆಸರಿನಲ್ಲಿ ನಾಶಬೇಡ ಎಂದು ರೈತರು ಮತ್ತು ಪುಟಾಣಿ ಮಕ್ಕಳು ಪ್ಲೇಕಾರ್ಡ್‌ಗಳನ್ನು ಪ್ರದರ್ಶನ ಮಾಡಿದರು.ಎಚ್‌ಡಿಕೆ ಅವರದ್ದು ಗೋಸುಂಬೆ ರಾಜಕಾರಣ: ಬಾಲಕೃಷ್ಣ
ಬಿಡದಿ ಟೌನ್‌ಶಿಪ್ ಯೋಜನೆ ಘೋಷಿಸುವ ಮೂಲಕ ಕೃಷಿ ಪ್ರದೇಶವನ್ನು ರೆಡ್ ಜೋನ್ ಮಾಡಿದವರೇ ಈಗ ಬೇಡವೆಂದು ಹೋರಾಟಕ್ಕಿಳಿದು ಗೋಸುಂಬೆ ರೀತಿಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರು ಹೋರಾಟ ಮಾಡುತ್ತಿದ್ದಾರೆಂದು ಇಲ್ಲಿವರೆಗೆ ಭಾವಿಸಿದ್ದೆವು. ಆದರೆ, ಅಲ್ಲಿ ಹೋರಾಟ ಮಾಡುತ್ತಿರುವುದು ರೈತರಲ್ಲ, ಜೆಡಿಎಸ್ ಪಕ್ಷದವರು ಎಂಬುದು ಸ್ಪಷ್ಟವಾಗಿದೆ. ರೈತರ ಹೆಸರಿನಲ್ಲಿ ಜೆಡಿಎಸ್ ನಡೆಸುತ್ತಿರುವ ರಾಜಕೀಯ ಹೋರಾಟಕ್ಕೆ ನಾವೂ ರಾಜಕೀಯವಾಗಿಯೇ ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು. ಭೂಮಿ ಕೊಡಲು ಸಿದ್ಧರಾಗಿರುವ ರೈತರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಪಾದಯಾತ್ರೆ ನಡೆಸುತ್ತೇನೆ. ಬೈರಮಂಗಲ ವೃತ್ತದಲ್ಲಿ ಎಲ್‌ಇಡಿ ಸ್ಕ್ರೀನ್ ಹಾಕಿಸಿ ಟೌನ್ ಶಿಪ್ ವಿಚಾರದಲ್ಲಿ ಯಾವ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲಿ ಏನೆಲ್ಲ ಬೆಳವಣಿಗೆಗಳಾಗಿವೆ ಎಂಬುದನ್ನು ಬಹಿರಂಗ ಪಡಿಸುತ್ತೇನೆ ಎಂದರು. ಕುಮಾರಸ್ವಾಮಿ ಅವರನ್ನು ಜೈಲಿಗೆ ಕಳುಹಿಸಬೇಕಾಗಿದ್ದರೆ ನಿನ್ನೆಯೇ ಕಳುಹಿಸುತ್ತಿದ್ದೆವು. ಅವರು ಜೈಲಿಗೆ ಹೋಗುವುದು ಬೇಡ. ನಮ್ಮನ್ನು ನಿದ್ದೆ ಮಾಡಲು ಬಿಡದೆ ಸದಾ ಎಚ್ಚರಿಸುತ್ತಿರಲಿ ಎಂದು ಬಾಲಕೃಷ್ಣ ಟೀಕಿಸಿದರು.