ಕೊಪ್ಪಳ-ಗದಗ ಪವರ್‌ಗ್ರಿಡ್ ಟ್ರಾನ್ಸ್‌ಮಿಷನ್ ಲಿಮಿಟೆಡ್ ಕಂಪನಿ ರೈತರ ಮೇಲೆ ಅನ್ಯಾಯ ನಿಲ್ಲಿಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ಶುಕ್ರವಾರ ಧರಣಿ ನಡೆಸಿದರು.
ಕುಕನೂರು: ಕೊಪ್ಪಳ-ಗದಗ ಪವರ್‌ಗ್ರಿಡ್ ಟ್ರಾನ್ಸ್‌ಮಿಷನ್ ಲಿಮಿಟೆಡ್ ಕಂಪನಿ ರೈತರ ಮೇಲೆ ಅನ್ಯಾಯ ನಿಲ್ಲಿಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಇಟಗಿ-ಮಸಬಹಂಚಿನಾಳ ರಸ್ತೆಯ ಸರ್ವೆ ನಂ. ೮೭ ಜಮೀನನ ಪಕ್ಕದಲ್ಲಿ ರೈತರು ಶುಕ್ರವಾರ ಧರಣಿ ನಡೆಸಿದರು. ಈ ವೇಳೆ ಧರಣಿಕಾರರು ಮಾತನಾಡಿ, ಟ್ರಾನ್ಸ್‌ಮಿಷನ್ ಲಿಮಿಟೆಡ್ ಕಂಪನಿಯಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರೈತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ಇಟಗಿ, ಮನ್ನಾಪೂರ, ಮಸಬಹಂಚಿನಾಳ, ಗಾವರಾಳ, ದ್ಯಾಂಪೂರು ಗ್ರಾಮಗಳಲ್ಲಿ ಪವರ್‌ಗ್ರಿಡ್ ನವರು ಹೈ ಟೆನ್ಶನ್
ಪವರ್ ವೈರ್ ಎಳೆಯುತ್ತಿದ್ದಾರೆ. ಇದಕ್ಕೆ ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಅಲ್ಲದೆ ಇದರಿಂದ ಜಮೀನುಗಳೂ ಹಾಳಾಗುತ್ತಿವೆ. ಪ್ರಸಕ್ತ ಮುಂಗಾರು ಬಿತ್ತನೆ ಪ್ರಾರಂಭಗೊಂಡಿದ್ದು, ಬಿತ್ತನೆ ಮಾಡಲು ಕಷ್ಟವಾಗುತ್ತದೆ. ಇನ್ನೂ ಜಮೀನಿನಲ್ಲಿರುವ ಬೋರ್‌ವೆಲ್, ಬಾವಿ, ಶೆಡ್, ಹಣ್ಣಿನ ಗಿಡಗಳು, ಶ್ರೀಗಂಧದ ಗಿಡಗಳು ಪವರ್ ಗ್ರಿಡ್ ಕಂಬಗಳ ಅಳವಡಿಕೆಯಿಂದ ಹಾಳಾಗಿವೆ. ಅವುಗಳಿಗೆ ಸೂಕ್ತ ಪರಿಹಾರ ಸಹ ನೀಡಿಲ್ಲ. ಪವರ್ ಗ್ರೀಡ್ ಅಧಿಕಾರಿಗಳು ದೌರ್ಜನ್ಯ ಮಾಡುತ್ತಿದ್ದಾರೆ. ಕೂಡಲೇ ರೈತರ ಹಲವು ಬೇಡಿಕೆ ಈಡೇರಿಸಬೇಕು. ಜಿಲ್ಲಾವಾರು ಟವರ್ ನಿರ್ಮಾಣದಲ್ಲಿ ಹಣದ ವಿತರಣೆಯಲ್ಲಿ ನಡೆದ ತಾರತಮ್ಯವನ್ನು ಸರಿಪಡಿಸಬೇಕು. ಕಾರಿಡಾರ ಕೆಳಗೆ ಗಿಡಮರಗಳು ಹಾಗೂ ತೋಟಗಾರಿಕೆ ಬೆಳೆಗಳ ಪರಿಹಾರವನ್ನು ನಿಗದಿಪಡಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮೌಲ್ಯ ಮಾಪನ ಮಾಡಿ ದರ ನಿಗದಿಪಡಿಸಬೇಕು. ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಶ್ರೀಗಂಧ, ತೆಂಗು, ಪೇರಲ, ಕರಿಬೇವು, ನುಗ್ಗೆ ಸೇರಿದಂತೆ ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ನೀಡುವುದು. ತೋಟಗಾರಿಕೆ ಬೀಜೋತ್ಪಾದನೆ ಬೆಳೆಗಳಾದ ಹತ್ತಿ, ಕಲ್ಲಂಗಡಿ, ಕುಂಬಳ, ಮೆಣಸಿನಕಾಯಿ ಇತರ ಬೆಳೆಗಳಿಗೂ ಸೂಕ್ತ ಪರಿಹಾರ ನೀಡಬೇಕು. ಪವರ್‌ಗ್ರಿಡ್ ವಿದ್ಯುತ್ ಸರಬರಾಜು ಕೆಳಗಡೆ ರೈತರು ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅಪಾಯವಾಗುವ ಸಾಧ್ಯತೆ ಇದ್ದು, ಕಾರಿಡಾರ್ ಲೈನ್ ಕೆಳಗೆ ಬರುವ ರೈತರಿಗೆ ಕಡ್ಡಾಯವಾಗಿ ₹೨ ಕೋಟಿ ವಿಮೆ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುಳ್ಳಿ, ತಾಪಂ ಮಾಜಿ ಅಧ್ಯಕ್ಷ ಪ್ರಭುರಾಜ್ ಆಚಾರ್, ರೈತ ಮುಖಂಡರಾದ ಶೇಖರಗೌಡ ಹಕ್ಕಂಡಿ, ಹೇಮಣ್ಣ ಯರಾಶಿ, ಉಮೇಶ ವೀರಾಪುರ, ಬಸವರಾಜ ಸೊಂಪೂರ, ಬಸಪ್ಪ ಮಂಡಲಗೇರಿ, ಬಸನಗೌಡ ಮುದ್ದಾಬಳ್ಳಿ, ರುದ್ರಪ್ಪ ಬೋರಣ್ಣನವರ, ಮಹೇಶ ಹಿರೇಮನಿ, ಈರಯ್ಯ ಕಳ್ಳಿಮಠ, ಭೀಮನಗೌಡ ಹಕ್ಕಂಡಿ, ಮಹೇಶ ದೊಡ್ಡಮನಿ, ಮಹೇಶ ಹಕ್ಕಂಡಿ ಇತರರಿದ್ದರು.