ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಸ್ವಾಧೀನಗೊಳ್ಳಲಿರುವ ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಅರ್ಜಿ ಸ್ವೀಕಾರ ಮಾಡುತ್ತಿದ್ದ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಅವರನ್ನು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರು ಶನಿವಾರ ದಿಗ್ಬಂಧನ ವಿಧಿಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಸ್ವಾಧೀನಗೊಳ್ಳಲಿರುವ ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಅರ್ಜಿ ಸ್ವೀಕಾರ ಮಾಡುತ್ತಿದ್ದ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಅವರನ್ನು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರು ಶನಿವಾರ ದಿಗ್ಬಂಧನ ವಿಧಿಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

ನಗರದ ಹಳೇಯ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿಯ ಸಭಾಂಗಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆಯ 9 ಕಂದಾಯ ಗ್ರಾಮಗಳ 26 ಹಳ್ಳಿಗಳ ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ರೈತರಿಂದ ಅರ್ಜಿ ಸ್ವೀಕಾರ ಕಾರ್ಯಕ್ರಮದಲ್ಲಿ ರೈತರು ಶಾಸಕ ಬಾಲಕೃಷ್ಣ ಹೊರಗೆ ಹೋಗದಂತೆ ಸಭಾಂಗಣದಲ್ಲಿಯೇ ದಿಗ್ಬಂಧನ ವಿಧಿಸಿದರು.

ಸಭೆಯ ಆರಂಭದಲ್ಲಿ ಶಾಸಕ ಬಾಲಕೃಷ್ಣ, ಭೂಸ್ವಾಧೀನ ಪ್ರಕ್ರಿಯೆ 15-20 ವರ್ಷಗಳ ಹಿಂದೆ ಆಗಿದ್ದು, ಈಗ ದಾಖಲಾತಿಗಳನ್ನು ಸರಿಪಡಿಸುವ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಯುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ರೈತ ಮಹಿಳೆಯರು, ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರೂ ಸೌಜನ್ಯಕ್ಕಾದರು ಸ್ಥಳಕ್ಕೆ ಭೇಟಿ ನೀಡಿಲ್ಲ. ರೈತರ ಮೇಲೆ ನಿಮಗೆ ಕಾಳಜಿ ಇಲ್ಲವೇ. ಕೇವಲ ಸಭೆಗೆ ಮಾತ್ರ ಸೀಮಿತವೆ. ಭೂಸ್ವಾಧೀನ ಪ್ರಕ್ರಿಯೆ ಮತ್ತು ಸರ್ಕಾರ ನಿಗದಿಪಡಿಸಿದ ಪರಿಹಾರ ದರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೆ, ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ, ಈ ಯೋಜನೆಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಘೋಷಿಸಿದರು.

ಶಾಸಕರು ರೈತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ಕೊನೆಗೆ ರೈತರು ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ನಮಗೆ ನ್ಯಾಯ ಬೇಕು, ಇದು ನಮ್ಮ ಹಕ್ಕು, ರೈತರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗುತ್ತಾ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಪ್ರಶ್ನಿಸಿ, ತಮ್ಮ ಅರ್ಜಿಯನ್ನು ಅಂಗೀಕರಿಸಬೇಕು ಮತ್ತು ತಮ್ಮ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿ ಹೊರ ಬಂದು ಸಭಾಂಗಣದ ದ್ವಾರದಲ್ಲಿ ಧರಣಿ ಕುಳಿತರು.

ಸುಮಾರು 1 ತಾಸಿನ ಬಳಿಕ ಸಭಾಂಗಣದಿಂದ ಹೊರ ಬಂದ ಶಾಸಕ ಬಾಲಕೃಷ್ಣ ಅವರನ್ನು ರೈತರು ಮುತ್ತಿಗೆ ಹಾಕಿದರು. ಶಾಸಕರು ಒಂದೆಡೆ ರೈತರನ್ನು ಸಮಾಧಾನ ಪಡಿಸುತ್ತಿದ್ದರೆ, ಮತ್ತೊಂದೆಡೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಈ ವೇಳೆ ಮಾತನಾಡಿದ ಬಾಲಕೃಷ್ಣ, ನಾನು ಯಾಕೆ ಇಷ್ಟುದಿನ ನಿಮ್ಮ ಮುಂದೆ ಬರಲಿಲ್ಲ ಅಂದರೆ ಬಂದಾಗ ಹೊಡೆಯೋಕೆ ಬರುತ್ತೀರಿ. ಬಾಯಿಗೆ ಬಂದ ಹಾಗೆ ಬಯ್ಯುತ್ತೀರಿ. ಅದಕ್ಕೆ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ. ನಾನು ರೈತರ ಮಗ, ನಮಗೆ ಯಾವುದೇ ಭೇದ ಇಲ್ಲ. ನಿಮ್ಮ ಅಹವಾಲು ಏನಿದಿಯೊ ಅದನ್ನು ಸರ್ಕಾರಕ್ಕೆ ತಿಳಿಸುತ್ತೇನೆ. ನಿಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿ ಹೊರ ನಡೆದರು.

ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಅಧಿಕಾರಿ ಮಾರುತಿ ಪ್ರಸನ್ನ, ತಾಪಂ ಇಒ ಪೂರ್ಣಿಮಾ ಮತ್ತಿತರರು ಹಾಜರಿದ್ದರು.

ಬಾಕ್ಸ್‌...........

ಬಿಡದಿ ಟೌನ್ ಶಿಪ್ ಪರ ವಿರೋಧ ಸರ್ಕಾರದ ಗಮನಕ್ಕೆ ತರುವೆ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಸ್ವಾಧೀನವಾಗುವ ಭೂಮಿ ವಿಚಾರವಾಗಿ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸಲು ರೈತರ ಸಭೆ ಕರೆಯಲಾಗಿತ್ತು. ಅನೇಕರು ಒಪ್ಪಿಗೆ ಸೂಚಿದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎರಡೂ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಸ್ವಾಧೀನ ವಿರೋಧಿಸಿ ಕೆಲ ರೈತರು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ವಿರೋಧ ಮಾಡಿದ್ದಾರೆ. ಮತ್ತಷ್ಟು ರೈತರು ಜಮೀನು ಕೊಡಲು ಒಪ್ಪಿಗೆ ಪತ್ರ ನೀಡಿದ್ದಾರೆ. ಇದೆಲ್ಲವನ್ನೂ ಸರ್ಕಾರಕ್ಕೆ ಕಳಿಸುತ್ತೇವೆ ಎಂದರು.

ಈ ಯೋಜನೆಗೆ ಪರ-ವಿರೋಧ ಇರುವುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೊ ನೋಡುತ್ತೇವೆ. ರೈತರು ಸಭೆ ಕರೆದಿಲ್ಲ ಅಂತಾ ಆರೋಪಿಸುತ್ತಾರೆ. ಪ್ರತಿಭಟನೆ ಮಾಡುವವರು ಸಭಗೆ ಬನ್ನಿ ಅಂದರೆ ನೂರಾರು ಜನ ಬರುತ್ತೇವೆ ಅನ್ನುತ್ತಾರೆ. ಆ ಕಾರಣಕ್ಕಾಗಿ ಸಭೆಯನ್ನು ಮುಂದೂಡಿದ್ದೆ ಎಂದು ಬಾಲಕೃಷ್ಣ ಹೇಳಿದರು.

17ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಹಳೇಯ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದ ಹೊರಗೆ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಶಾಸಕ ಬಾಲಕೃಷ್ಣ ಮಾತನಾಡಿದರು.