ಸಾರಾಂಶ
ರೈತರು ಸಹಕಾರಿ ಕ್ಷೇತ್ರವನ್ನು ಉಪಯೋಗಿಸಿದಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಶ್ರೀ ವಾಲ್ಕೀಕಿ ನಾಯಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ಬಸವರಾಜಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ರೈತರು ಸಹಕಾರಿ ಕ್ಷೇತ್ರವನ್ನು ಉಪಯೋಗಿಸಿದಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಶ್ರೀ ವಾಲ್ಕೀಕಿ ನಾಯಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ಬಸವರಾಜಪ್ಪ ತಿಳಿಸಿದರು.ಸಮೀಪದ ಮಾರಶೆಟ್ಟಿಹಳ್ಳಿ ಮರಾಠ ಸಮುದಾಯ ಭವನದಲ್ಲಿ ನಡೆದ ಶ್ರೀ ವಾಲ್ಮೀಕಿ ನಾಯಕ ಪತ್ತಿನ ಸಹಕಾರ ಸಂಘದ ಪ್ರಥಮ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿ ಷೇರುದಾರರ ಸಹಕಾರವನ್ನು ಮರೆಯುವಂತಿಲ್ಲ. ಅನ್ನದಾತರ ಪಾಲಿಗೆ ಯಶಸ್ವಿನಿ ಆರೋಗ್ಯ ಯೋಜನೆ ಸಂಜೀವನಿ ಇದ್ದಂತೆ. ಸಂಘ ಖರೀದಿಸಿರುವ ಸ್ವಂತ ಜಾಗದ ಸಮಸ್ಯೆ ಸದ್ಯದಲ್ಲಿಯೇ ಪರಿಹಾರವಾಗುವುದು. ಸಕಾಲದಲ್ಲಿ ಸಾಲ ಮರುಪಾವತಿಸಿ ಸಂಘದ ಏಳಿಗೆಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.ಸಹಕಾರಿ ಕ್ಷೇತ್ರದ ಲಾಭಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಸಾಲ ಪಡೆಯುವುದು ನಮ್ಮ ಹಕ್ಕು, ಅದರಂತೆ ಮರುಪಾವತಿ ನಮ್ಮದೇ ಜವಾಬ್ದಾರಿ ಆಗಿರಬೇಕು. ಸಕಾಲದ ಸಾಲ ಮರುಪಾವತಿಗಳು ಸಂಘದ ಆರ್ಥಿಕತೆ ಉತ್ತಮವಾಗುವಂತೆ ಮಾಡುತ್ತದೆ ಎಂದರು.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳದಂತೆ ಎಚ್ಚರ ವಹಿಸಬೇಕು. ಸಂಘದಲ್ಲಿ ನಡೆಯುವ ಸಭೆಗಳಿಗೆ ತಪ್ಪದೇ ಹಾಜರಾಗಬೇಕು. ಶೂನ್ಯ ಬಡ್ಡಿದರ ಸಾಲ ಸೌಲಭ್ಯ ಕೃಷಿಕರಿಗೆ ವರದಾನವಾಗಿದ್ದು, ರೈತರು ಸಂಘಗಳಲ್ಲಿ ವ್ಯವಹಾರ ಮಾಡುವತ್ತ ಗಮನ ಹರಿಸಬೇಕು. ಬಂಗಾರ ಅಡಮಾನ ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಷೇರು ಧನ ಹೆಚ್ಚಳವಾದಷ್ಟು ದುಡಿಯುವ ಬಂಡವಾಳ ಲಭ್ಯವಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಪ್ರತಿಯೊಬ್ಬರು ಸಂಘದಲ್ಲಿ ತಪ್ಪದೆ ನಿಯಮಿತವಾಗಿ ವ್ಯವಹಾರ ಮಾಡಬೇಕು ಎಂದರು.ಸಂಘದ ಉಪಾಧ್ಯಕ್ಷ ಶೇಖರಪ್ಪ, ನಿರ್ದೇಶಕರಾದ ಟಿ.ಲಕ್ಷ್ಮಣಪ್ಪ, ನಾಗರಾಜಪ್ಪ, ರಂಗಪ್ಪ, ಶಿವಕುಮಾರ್, ಶ್ರೀಧರ್ ಕೆ.ಆರ್., ರವಿಕುಮಾರ್, ಪ್ರೇಮಾ ತಿಮ್ಮಪ್ಪ, ಶಕುಂತಲಾ ಹಾಲೇಶ್, ತಿಪ್ಪೇಶ್, ಬಸವರಾಜಪ್ಪ, ಶಿವಮೂರ್ತಿ, ನಾಗರಾಜ್ ಚಂದ್ರಪ್ಪ ಹಾಜರಿದ್ದರು.