ಸಾರಾಂಶ
ಗ್ರಾಹಕರೊಬ್ಬರು ವಿದ್ಯುತ್ ಬಳಸದಿದ್ದರೂ ₹89 ಸಾವಿರಕ್ಕೂ ಅಧಿಕ ವಿದ್ಯುತ್ ಬಳಕೆಯ ಹಳೆ ಬಾಕಿ ಇದ್ದು ಅದನ್ನ ಪಾವತಿಸಿ ಎಂದು ಏಕಾ ಏಕಿ ನೋಟೀಸ್ ನೀಡಲಾಗಿದೆ.
₹89 ಸಾವಿರ ಪಾವತಿಸಲು ನೊಟೀಸ್ ನೀಡಿ ಸಂಪರ್ಕ ಕಡಿತಕ್ಕೆ ಕ್ರಮಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಗ್ರಾಹಕರೊಬ್ಬರು ವಿದ್ಯುತ್ ಬಳಸದಿದ್ದರೂ ₹89 ಸಾವಿರಕ್ಕೂ ಅಧಿಕ ವಿದ್ಯುತ್ ಬಳಕೆಯ ಹಳೆ ಬಾಕಿ ಇದ್ದು ಅದನ್ನ ಪಾವತಿಸಿ ಎಂದು ಏಕಾ ಏಕಿ ನೋಟೀಸ್ ನೀಡಲಾಗಿದೆ. ಅಲ್ಲದೆ ಪುನಃ ವಿದ್ಯುತ್ ಕಡಿತಗೊಳಿಸಿ ಗ್ರಾಹಕರಿಗೆ ತೊಂದರೆ ನೀಡಿದ್ದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಚೆಸ್ಕಾಂ ಅಧಿಕಾರಿಗಳ ಕರ್ತವ್ಯಲೋಪ ಖಂಡಿಸಿ ₹50 ಸಾವಿರ ದಂಡ ಮತ್ತು ಗ್ರಾಹಕರಿಗೆ ₹10 ಸಾವಿರ ಪರಿಹಾರ ಸೇರಿದಂತೆ ₹60 ಸಾವಿರ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.ಕೊಳ್ಳೇಗಾಲ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಪಟ್ಟಣದ ನಿವಾಸಿ ಆರ್ಮುಗಂಗೆ ಕೆಐಪಿ ಸಂಖ್ಯೆಯ 3999ಗೆ ಹಳೆ ಬಾಕಿ ಇದ್ದು, 2016ರಿಂದ 2019ರತನಕ 3 ವರ್ಷಗಳ ಬಾಕಿ (ಆಡಿಟ್ ಕ್ಲೈಂ) ಎಂದು ನಮೂದಿಸಿ ₹89,398 ಬಿಲ್ ಅನ್ನು ಕೂಡಲೇ ಪಾವತಿಸಿಬೇಕು ಎಂದು ಕಳೆದ ಫೆ. 23ರಂದು ನೋಟೀಸ್ ಜಾರಿಗೊಳಿಸಿದ್ದರು.ಅಲ್ಲದೆ ನೋಟೀಸ್ ಜಾರಿಗೊಳಿಸಿ ತಿಂಗಳೊಳಗೆ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರು. ಗ್ರಾಹಕ ಆರ್ಮುಗಂ ಚೆಸ್ಕಾಂ ಅಧಿಕಾರಿ, ನೌಕರರು ಸೇವಾ ನ್ಯೂನ್ಯತೆ, ಕರ್ತವ್ಯಲೋಪ ಖಂಡಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮಾರ್ಚ್ 16ರಂದು ದೂರು ಸಲ್ಲಿಸಿದ್ದರು.
ವಿದ್ಯುತ್ ಸಂಪರ್ಕ ಕಡಿತದಿಂದ ₹1 ಲಕ್ಷ ಬೆಲೆಬಾಳುವ ಉಪಕರಣ ಹಾಳಾಗಿದ್ದು, ಅಧಿಕಾರಿಗಳ ಲೋಪಕ್ಕಾಗಿ ₹50 ಸಾವಿರ ಪರಿಹಾರ, ಆಯೋಗದ ಖರ್ಚು ವೆಚ್ಚಗಳಿಗಾಗಿ ₹25 ಸಾವಿರ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಆಯೋಗದ ಪ್ರಭಾರಿ ಅದ್ಯಕ್ಷ ಎಚ್. ಎಲ್. ಶ್ರೀನಿಧಿ, ಮಹಿಳಾ ವಿಭಾಗದ ಸದಸ್ಯೆ ಎಂ. ವಿ. ಭಾರತಿ ಅವರು ಕೇಸ್‌ವನ್ನು 5 ತಿಂಗಳಿಗೂ ಹೆಚ್ಚು ದಿನಗಳ ಕಾಲ ಕೂಲಂಕುಷವಾಗಿ ವಿಚಾರಣೆ ನಡೆಸಿ ₹89 ಸಾವಿರ ಬಾಕಿ ಮೊತ್ತ ( 2016ರಿಂದ 2019 ರತನಕ) ಮೀಟರ್ ಮಾಪನದ ವ್ಯತ್ಯಾಸದ ಬಾಕಿ ಹಣವನನ್ನು ಚೆಸ್ಕಾಂನಲ್ಲಿ ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ, ನೌಕರರಿಂದ ವಸೂಲಿ ಮಾಡುವಂತೆ ಆದೇಶಿಸಿದ್ದಾರೆ.ಅಲ್ಲದೆ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತೊಂದರೆ ನೀಡಿದ್ದಕ್ಕಾಗಿ ₹50 ಸಾವಿರವನ್ನು ಪರಿಹಾರದ ರೂಪದಲ್ಲಿ ಹಾಗೂ ಪ್ರಕರಣದ ಖರ್ಚು ವೆಚ್ಚಗಳಿಗಾಗಿ ₹10 ಸಾವಿರ 1ತಿಂಗಳೊಳಗೆ ಗ್ರಾಹಕರಿಗೆ ಪಾವತಿಸತಕ್ಕದ್ದು, ಇಲ್ಲದಿದ್ದಲ್ಲಿ ಶೇ. 12ರಷ್ಟು ಬಡ್ಡಿ ಸೇರಿಸಿ ನೀಡಬೇಕಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
2003 ಕಲಂ 56(2)ರ ಕರ್ನಾಟಕ ವಿದ್ಯುತ್ ಕಾಯ್ದೆಯಂತೆ 2 ವರ್ಷ ಗ್ರಾಹಕರಿಂದ ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಿಕೊಳ್ಳಬೇಕು. 2 ವರ್ಷಗಳ ಅವಧಿ ಮೀರಿದ ಬಾಕಿ ಮೊತ್ತ ವಸೂಲಿ ಮಾಡುವಂತಿಲ್ಲ ಎಂಬ ನಿಯಮ ಉಲ್ಲಂಘಿಸಿದ ಕುರಿತು ಗ್ರಾಹಕರ ವ್ಯಾಜ್ಯಗಳ ವೇದಿಕೆಯಲ್ಲಿ ಪ್ರಸ್ತಾಪಿತವಾಗಿದೆ. ಈ ಮೊತ್ತ 6 ವರ್ಷದ್ದು, ಚೆಸ್ಕಾಂ ಇಲಾಖೆ ಬಾಕಿ ಹಣ ಪಡೆಯಲು ಅರ್ಹವಾಗಿಲ್ಲ ಎಂಬುದಾಗಿ ಗ್ರಾಹಕರ ಪರ ವಕೀಲರು ವಾದಮಂಡಿಸಿದ್ದರು.ಈ ಕೇಸ್ ಕುರಿತು ಪ್ರತಿಕ್ರಿಯಿಸಿರುವ ಟೌನ್ ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಸುಂದರರಾಜು,
₹89 ಸಾವಿರ ಹಳೆ ಬಾಕಿ ಪಾವತಿಸಲು ನೋಟೀಸ್ ನೀಡಿದ ವಿಚಾರದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಲಿಲ್ಲ. ಗ್ರಾಹಕ ಆರ್ಮುಗಂ ವಿದ್ಯುತ್ ಸಂಪರ್ಕ ತೆಗೆದುಹಾಕಿ ಹಿಂಸೆ ನೀಡಲಾಗಿತ್ತು. ಗ್ರಾಹಕರ ವೇದಿಕೆಗೆ ದೂರು ನೀಡಲಾಗಿತ್ತು. ವೇದಿಕೆಯ ಅಧ್ಯಕ್ಷ, ಸದಸ್ಯರು ಚೆಸ್ಕಾಂ ಇಲಾಖೆಯ ನ್ಯೂನ್ಯತೆ ಪ್ರಶ್ನಿಸಿ ₹50ಸಾವಿರ ದಂಡ ವಿಧಿಸಿ, ಗ್ರಾಹಕರ ಖರ್ಚಿಗಾಗಿ ₹10 ಸಾವಿರ ಪರಿಹಾರ ನೀಡಲು ಸೂಚಿಸಿದ್ದಾರೆ. ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದರು.