ರಾಣಿಬೆನ್ನೂರು: ರೈತರು ರಸಗೊಬ್ಬರಗಳ ಸಮರ್ಪಕ ಬಳಕೆ ಮಾಡಬೇಕು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಮಹೇಶ ಕಾರಗಿ ಹೇಳಿದರು.
ತಾಲೂಕಿನ ಅಸುಂಡಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಹಾಗೂ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಖೇತ್ ಬಚಾವೋ ಆಂದೋಲನದಡಿ ಸಮತೋಲಿತ ರಸಗೊಬ್ಬರಗಳ ಬಳಕೆ ಕುರಿತು ರೈತರಿಗೆ ಏರ್ಪಡಿಸಿದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕು. ಕೃಷಿಯ ಜತೆಯಲ್ಲಿಹೈನುಗಾರಿಕೆ, ಕುರಿ ಸಾಕಣಿಕೆ ಮತ್ತು ಹಿತ್ತಲ ಕೋಳಿ ಸಾಕಾಣಿಕೆಯನ್ನು ಕೈಗೊಳ್ಳಬೇಕು ಎಂದರು.
ತಾಂತ್ರಿಕ ಅಧಿಕಾರಿ ಫಕ್ಕೀರಪ್ಪ ಪಟ್ಟಣ ಮಾತನಾಡಿ, ಪ್ರಸ್ತುತ ಕೃಷಿಯಲ್ಲಿ ಯೂರಿಯಾ ರಸಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಗೂ ಪೋಷಕಾಂಶಗಳ ಸಮತೋಲನ ಹದಗೆಡುತ್ತಿದೆ. ಮಣ್ಣಿಗೆ ಜೀವಕೊಡುವ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿ ಮಣ್ಣು ಬರಡಾಗುವ ಹಂತದಲ್ಲಿದ್ದು, ಬೆಳೆ ಪರಿವರ್ತನೆ ಜತೆಗೆ ಸಾವಯವ ಕೃಷಿ ಆಧಾರಿತ ಪದ್ಧತಿಗಳಾದ ಮಾಗಿ ಉಳಿಮೆ, ಕೊಟ್ಟಿಗೆ ಗೊಬ್ಬರ, ಎರೆಹುಳುಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿಗೆ ಮರುಜೀವ ತರುವ ಕೆಲಸ ಆಗಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಮಾತನಾಡಿ, ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಆಗಿದ್ದು, ಇಂತಹ ಸಮಯದಲ್ಲಿ ರೈತರು ಕಡಿಮೆ ಖರ್ಚಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ಮಣ್ಣಿನ ಆರೋಗ್ಯ ಸಂರಕ್ಷಣೆ, ಸುಸ್ಥಿರ ಕೃಷಿ ಉತ್ತೇಜಿಸುವ ಉದ್ದೇಶದಿಂದ ರಾಸಾಯನಿಕ ಗೊಬ್ಬರದ ಅಸಮರ್ಪಕ ಬಳಕೆ ನಿಯಂತ್ರಿಸುವುದು, ನೈಸರ್ಗಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು, ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸುವುದು ಖೇತ್ ಬಚಾವೋ ಆಂದೋಲನ ಅಭಿಯಾನದ ಪ್ರಮುಖ ಗುರಿಯಾಗಿದೆ ಎಂದರು.
ರೈತ ಸಂಘದ ಸದಸ್ಯ ನಂದೀಶ್ವರ ಹುಲ್ಮನಿ, ಪ್ರಗತಿಪರ ರೈತರಾದ ಲಿಂಗನಗೌಡ ಪಾಟೀಲ, ಲಲಿತಮ್ಮ ಪಾರ್ವತೇರ, ಪ್ರಭುಗೌಡ ಗುತ್ತಲಗೌಡ್ರ, ಪರಮೇಶ್ವರ ನೆಗಳೂರ, ಚೌಡಪ್ಪ ಬೂದಿಹಾಳ ಮತ್ತು ಅಸುಂಡಿ ಗ್ರಾಮದ ರೈತರು ಉಪಸ್ಥಿತರಿದ್ದರು.