ಹೂವಿನಹಡಗಲಿ: ಇಲ್ಲಿನ 10 ಕೆರೆಗಳಿಗೆ ನೀರು ತುಂಬುವ ಯೋಜನೆಯ ಶಾಕಾರ ಬಳಿಯ ಜಾಕ್‌ವೆಲ್‌ನಿಂದ ದಾಸನಹಳ್ಳಿ, ಹ್ಯಾರಡ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಹೊಳಲು ರೈತರು ಧರಣಿ ಕುಳಿತಿದ್ದಾರೆ.
ಗುರುವಾರ ಬೆಳಗ್ಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಚೇರಿಗೆ ಬೀಗ ಜಡಿದು, ಧರಣಿ ಮಾಡುತ್ತಿರುವ ರೈತರು, ಶಾಕಾರ ಬಳಿಯ ಕೆರೆ ತುಂಬಿಸುವ ಯೋಜನೆಯ ಜಾಕ್‌ವೆಲ್‌ನ ಮೋಟಾರ್ ಪಂಪ್‌ಸೆಟ್ ಕೆಟ್ಟು ಹೋಗಿ 13 ದಿನಗಳು ಕಳೆದಿವೆ. ಇನ್ನು ಅಧಿಕಾರಿಗಳು ದುರಸ್ತಿ ಮಾಡಲು ಇಲ್ಲಸಲ್ಲದ ನೆಪಗಳನ್ನು ಹೇಳುತ್ತಿದ್ದಾರೆ. ಈ ಯೋಜನೆಗೆ ಪ್ರತ್ಯೇಕ ವಿದ್ಯುತ್ ಲೈನ್ ಇಲ್ಲ, ಹೆಚ್ಚುವರಿ ನೀರೆತ್ತುವ ಮೋಟಾರ್ ಪಂಪ್‌ಸೆಟ್ ವ್ಯವಸ್ಥೆ ಇಲ್ಲ, ಕೆರೆ ತುಂಬಿಸುವ ಪೈಪ್‌ಲೈನ್ ಕಳಪೆ ಕಾಮಗಾರಿಯಾಗಿದೆ. ಇದರಿಂದ ಈ ಭಾಗದ ರೈತರಿಗೆ ಮತ್ತು ಜಾನುವಾರು, ಕುರಿ ಮೇಕೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಕೆರೆಗೆ ನೀರು ಹರಿಸುವ ವರೆಗೂ ಕಚೇರಿ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ.ಕೋಡಬಾಳ ಚಂದ್ರಪ್ಪ, ಎನ್. ವೀರಣ್ಣ, ತಾರಕೇಶ, ಎನ್. ಸುಭಾಷ, ಕುರುವತ್ತೆಪ್ಪ, ಎಚ್. ಮಂಜುನಾಥ ಇತರರಿದ್ದರು.
ಹೊಳಗುಂದಿ, ಬನ್ನಿಕಲ್ಲು ಕೆರೆಗೆ ನೀರು ಹರಿಸಲು ಒತ್ತಾಯ:ಹೂವಿನಹಡಗಲಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಮಾಗಳದ ಜಾಕ್‌ವೆಲ್‌ನಿಂದ ಬನ್ನಿಕಲ್ಲು ಕೆರೆ ಮತ್ತು ಹೊಳಗುಂದಿ ಕಾಲುವೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಗೋಣಿಬಸಪ್ಪ ಮಾತನಾಡಿ, ಈ ಬಾರಿ ಸಮರ್ಪಕವಾಗಿ ಮುಂಗಾರು ಮಳೆ ಆಗಿಲ್ಲ, ತಾಲೂಕಿನಾದ್ಯಂತ ಕೆರೆಗಳು, ಗೋ ಕಟ್ಟೆಗಳು ಹಾಗೂ ಬೋರ್‌ವೆಲ್‌ಗಳು ಸಂಪೂರ್ಣವಾಗಿ ಬತ್ತಿಹೋಗಿವೆ. ಇದರಿಂದ ರೈತರು ಹಾಗೂ ಜಾನುವಾರುಗಳು ತೀವ್ರ ಸಂಕಷ್ಟವನ್ನು ಎದುರಿಸುತ್ತಿವೆ, ಆದರಿಂದ ಕೂಡಲೇ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರೈತರ ಬೋರ್‌ವೆಲ್‌ಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕೃಷಿ ಚಟುವಟಿಕೆಗೂ ತೀವ್ರ ತೊಂದರೆಯಾಗಿದೆ. ಕೆರೆಗಳನ್ನು ತುಂಬಿಸಲು ಸರ್ಕಾರದಿಂದ ಆದೇಶವಿದ್ದರೂ ಹೊಳಗುಂದಿ ಕಾಲುವೆಗಳಿಗೆ ಹಾಗೂ ಬನ್ನಿಕಲ್ಲು ಕೆರೆಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ. ಅಲ್ಲದೆ, ತಾಲೂಕಿನ ಇತರ ಕೆರೆಗಳಿಗೂ ನೀರು ಹರಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದರು.ಕೆರೆ, ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಲು ನಿರ್ಲಕ್ಷ್ಯ ವಹಿಸಿದರೆ ಮುಂದಿನ 2–3 ದಿನಗಳಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಎಚ್. ಸಿದ್ದಪ್ಪ, ಜಿಲ್ಲಾ ಗೌರವಾಧ್ಯಕ್ಷ ಬಾಣದ ಶಿವಪ್ಪ, ಜಿಲ್ಲಾ ಉಪಾಧ್ಯಕ್ಷ ಕೆ. ಮಂಜುನಾಥ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ ಎಂ. ಹೊಳಗುಂದಿ, ಸಂಘಟನಾ ಕಾರ್ಯದರ್ಶಿ ಡಿ. ಗಿರೀಶ, ದುರುಗಪ್ಪ, ಕೆ. ಮರಿಯಪ್ಪ, ಮಹಮದ್ ರಫಿ, ಹನುಮಂತಪ್ಪ ಇತರರು ಯೋಜನೆಯ ಇಇ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.