ಭ್ರಷ್ಟಾಚಾರದ ವಿರುದ್ಧ ರೈತ ಸಂಘ ಪ್ರತಿಭಟನೆ

| Published : Nov 14 2024, 12:53 AM IST

ಸಾರಾಂಶ

ಹಿರಿಯೂರು: ತಾಲೂಕಿನ ಸರ್ಕಾರಿ ಇಲಾಖೆಗಳಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಹಿರಿಯೂರು: ತಾಲೂಕಿನ ಸರ್ಕಾರಿ ಇಲಾಖೆಗಳಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ತಾಲೂಕಿನ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬುಧವಾರದಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಸಂಬಂಧಪಟ್ಟ ಸಚಿವರು ಧರಣಿ ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲಾಗುತ್ತಿದ್ದು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡದೆ ಬಲಾಢ್ಯರಿಗೆ, ಭೂಗಳ್ಳರಿಗೆ ಮಣೆ ಹಾಕಲಾಗಿದೆ. ನೋಂದಣಿ ಇಲಾಖೆ, ಸರ್ವೆ ಇಲಾಖೆ ಮತ್ತು ಹಳೆ ದಾಖಲೆ ಪಡೆಯುವುದಕ್ಕೆ ಇಂತಿಷ್ಟು ಹಣ ಎಂದು ನಿಗದಿಪಡಿಸಲಾಗಿದ್ದು, ಮಧ್ಯವರ್ತಿಗಳಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎಂದು ದೂರಿದರು.

ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ನಡೆಸುತ್ತಿರುವ ಪಿಎನ್‌ಸಿ ಕಂಪನಿ ಹಾಗೂ ಉಪಗುತ್ತಿಗೆದಾರರು ರೈತರ ಹೆಸರಿನಲ್ಲಿ ಮಣ್ಣು ತುಂಬುತ್ತಾ ನೂರಾರು ಕೋಟಿ ತೆರಿಗೆಯನ್ನು ಕಟ್ಟದೇ ವಂಚಿಸುತ್ತಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿ ಭೂಸ್ವಾಧೀನ ಮಾಡಿ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ವಂಚಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಆದೇಶಿಸಬೇಕು ಎಂದು ಆಗ್ರಹಿಸಿದರು.

ಜೆಜೆಹಳ್ಳಿ, ಕಸಬಾ, ಐಮಂಗಲ ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಜಲಾಶಯದಿಂದ ನೀರು ತುಂಬಿಸಬೇಕು ಎಂದು ಜೆಜೆ ಹಳ್ಳಿಯಲ್ಲಿ 140 ದಿನದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ, ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಇಲಾಖೆಯಲ್ಲಿ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಪರಿಕರಗಳ ಬೆಲೆ ಮಾರುಕಟ್ಟೆ ದರಕ್ಕೂ ಸಬ್ಸಿಡಿ ದರಕ್ಕೂ ಕೇವಲ ಶೇ .10 ರಷ್ಟು ಮಾತ್ರ ವ್ಯತ್ಯಾಸವಿದ್ದು, ರೈತರ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಕಂಪನಿಗಳ ಮಾಲೀಕರು ಸರ್ಕಾರಕ್ಕೆ ಮತ್ತು ರೈತರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅರಣ್ಯ ಇಲಾಖೆಯಲ್ಲಿ ಪ್ರತಿ ವರ್ಷ ಗಿಡ ನೆಡುವ ಕಾಮಗಾರಿ ನಡೆಸುತ್ತಿದ್ದು, ಕೋಟ್ಯಾಂತರ ಹಣ ದುರುಪಯೋಗವಾಗಿದೆ. ಕಂಪನಿಗಳು ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡಿಕೊಂಡರು ಸಹ ಯಾವುದೇ ಕ್ರಮ ವಹಿಸುತ್ತಿಲ್ಲ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ದಿನ ನಿತ್ಯ ಅಕ್ರಮ ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಕೆರೆಗಳ ಪುನಶ್ಚೇತನ ಕಾಮಗಾರಿ, ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಮ್, ಗೋಕಟ್ಟೆ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸಿದ್ದರಾಮಣ್ಣ, ಮೀಸೆ ರಾಮಣ್ಣ, ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಬಿ.ಆರ್.ರಂಗಸ್ವಾಮಿ, ದೊರೆಸ್ವಾಮಿ, ಸಣ್ಣ ತಿಮ್ಮಣ್ಣ, ಗೋಪಾಲಪ್ಪ, ತಿಮ್ಮಜ್ಜ, ಸಿಂಪಣ್ಣ, ಜಗನ್ನಾಥ್, ಹುಸೇನ್, ಕೃಷ್ಣಪ್ಪ, ಕರಿಯಪ್ಪ, ಜಯಮ್ಮ, ರಾಜಮ್ಮ, ತಿಪ್ಪಮ್ಮ, ರಾಜಪ್ಪ, ಪೂಜಣ್ಣ, ಹನುಮಂತಪ್ಪ ಮುಂತಾದವರು ಹಾಜರಿದ್ದರು.