ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಉಪಸಮರ: 82% ಮತ

| Published : Nov 14 2024, 12:53 AM IST / Updated: Nov 14 2024, 09:36 AM IST

ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಉಪಸಮರ: 82% ಮತ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಒಟ್ಟು ಶೇ.81.84ರಷ್ಟು ಮತದಾನವಾಗಿದೆ.

 ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಒಟ್ಟು ಶೇ.81.84ರಷ್ಟು ಮತದಾನವಾಗಿದೆ.

ಬುಧವಾರ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಬೇರಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸಂಡೂರು ಕ್ಷೇತ್ರದಲ್ಲಿ ಆರು, ಶಿಗ್ಗಾಂವಿ ಕ್ಷೇತ್ರದಲ್ಲಿ ಎಂಟು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳು ಸೇರಿ ಒಟ್ಟು 45 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. ಮತಯಂತ್ರಗಳನ್ನು ಎಣಿಕೆ ಕೇಂದ್ರದಲ್ಲಿ ಭದ್ರವಾಗಿಡಲಾಗಿದ್ದು, ಇದೇ ತಿಂಗಳು 23ರಂದು ಮತ ಎಣಿಕೆ ನಡೆಯಲಿದೆ.

ಚನ್ನಪಟ್ಟಣದಲ್ಲಿ 88% ಮತ:

ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ, ಶೇ.88.80ರಷ್ಟು ಮತದಾನವಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ.80.48ರಷ್ಟು ಮತ್ತು ಸಂಡೂರು ಕ್ಷೇತ್ರದಲ್ಲಿ ಶೇ.76.24ರಷ್ಟು ಮತದಾನವಾಗಿದೆ. ಕಳೆದ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದ್ದು, ಸಂಡೂರು ಕ್ಷೇತ್ರದಲ್ಲಿ ಮತದಾನ ಪ್ರಮಾಣ ಇಳಿಮುಖವಾಗಿದೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಅಲ್ಪ ಪ್ರಮಾಣದಲ್ಲಿ ಮತದಾನ ಹೆಚ್ಚಳವಾಗಿದೆ. ಕಳೆದ ಬಾರಿ ಶಿಗ್ಗಾಂವಿಯಲ್ಲಿ ಶೇ.80.46ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.80.48ರ ಪ್ರಮಾಣದಲ್ಲಿ ಮತದಾನವಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ಬಾರಿ ಶೇ.85.27ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.88.80ರಷ್ಟು ಮತದಾನವಾಗಿದೆ. ಆದರೆ, ಸಂಡೂರು ಕ್ಷೇತ್ರದಲ್ಲಿ ಕಳೆದ ಬಾರಿ ಶೇ.77.08ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.76.24ರಷ್ಟು ಮತದಾನ ಪ್ರಮಾಣವಾಗಿದೆ.

ಸಂಡೂರಿನಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಬಂಗಾರು ಹನುಮಂತು, ಕಾಂಗ್ರೆಸ್ ಅಭ್ಯರ್ಥಿಯಾಗಿ ಅನ್ನಪೂರ್ಣ ಕಣದಲ್ಲಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್‌ ಅಹ್ಮದ್ ಖಾನ್ ಪಠಾಣ್ ಸೇರಿ 45 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದೇ 23ರಂದು ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

ಮತ ಎಣಿಕೆ ಕೇಂದ್ರಗಳಿಗೆ ಬಿಗಿ ಬಂದೋಬಸ್ತ್‌:

ಮೂರು ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡ ಬಳಿಕ ಇವಿಎಂ ಯಂತ್ರಗಳನ್ನು ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿಡಲಾಗಿದೆ. ಸಿಆರ್‌ಪಿಎಫ್‌ ಯೋಧರು, ಸ್ಥಳೀಯ ಪೊಲೀಸರ ಕಣ್ಗಾವಲಿನಲ್ಲಿ ಭದ್ರಪಡಿಸಲಾಗಿದೆ. ಅಲ್ಲದೇ, ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆಯು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ. ಸಂಡೂರು ಕ್ಷೇತ್ರದ ಮತ ಎಣಿಕೆಯು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಜರುಗಲಿದೆ. ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆಯು ರಾಮನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ.

- ಭರ್ಜರಿ ವೋಟಿಂಗ್‌- 23ರಂದು ಫಲಿತಾಂಶ

-----

ಚನ್ನಪಟ್ಟಣ: 88%

ಶಿಗ್ಗಾಂವಿ: 80%

ಸಂಡೂರು: 76% -