ಸಾರಾಂಶ
ಒಳ ಮೀಸಲಾತಿ ಜಾರಿ ಬಗ್ಗೆ ಸೂಕ್ತ ಶಿಫಾರಸು ಸಹಿತ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು : ಪರಿಶಿಷ್ಟ ಜಾತಿಯಡಿ ಒಳ ಮೀಸಲಾತಿ ಜಾರಿಗೆ ತರುವ ಸಲುವಾಗಿ ಶಿಕ್ಷಣ ಹಾಗೂ ಸರ್ಕಾರಿ ಸೇವೆಗಳಲ್ಲಿ ಉಪ ಜಾತಿಗಳವಾರು ಪ್ರಾತಿನಿಧ್ಯತೆ ಬಗ್ಗೆ ಅಗತ್ಯ ದತ್ತಾಂಶ (ಎಂಪರಿಕಲ್ ಡೇಟಾ) ಸಂಗ್ರಹಿಸಲು ಹಾಗೂ ಒಳ ಮೀಸಲಾತಿ ಜಾರಿ ಬಗ್ಗೆ ಸೂಕ್ತ ಶಿಫಾರಸು ಸಹಿತ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆಯೋಗಕ್ಕೆ ಎರಡು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದು, ಆಯೋಗದ ಕಾರ್ಯನಿರ್ವಹಣೆ ನಿಯಮಗಳ ಕುರಿತು ಪ್ರತ್ಯೇಕ ಆದೇಶದಲ್ಲಿ ತಿಳಿಸಲಾಗುವುದು. ಕಚೇರಿ, ವಾಹನ ವ್ಯವಸ್ಥೆ, ಅಗತ್ಯ ಸಿಬ್ಬಂದಿ, ಗೌರವಧನ ಹಾಗೂ ಇತರ ಸವಲತ್ತುಗಳನ್ನು ಕಲ್ಪಿಸುವ ಸಂಬಂಧ ಆದೇಶದಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ಅ.28 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ವೇಳೆ ಯಾವ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ನಿಗದಿ ಮಾಡಬೇಕು ಎಂಬ ಕುರಿತು ಪ್ರತ್ಯೇಕ ಆಯೋಗ ರಚಿಸಿ ವರದಿ ಪಡೆಯಲಾಗುವುದು. ಅಲ್ಲಿಯವರೆಗೆ ಯಾವುದೇ ನೂತನ ನೇಮಕಾತಿ ಅಧಿಸೂಚನೆ ಮಾಡುವುದಿಲ್ಲ ಎಂದು ತಿಳಿಸಲಾಗಿತ್ತು.
ಅದರಂತೆ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದ್ದು, ತನ್ಮೂಲಕ ನಾಲ್ಕು ದಶಕಗಳ ಪರಿಶಿಷ್ಟ ಜಾತಿಯ ಬೇಡಿಕೆಗೆ ಸ್ಪಂದಿಸಿದಂತಾಗಿದೆ. ಇದರಿಂದ ಒಳ ಮೀಸಲಾತಿ ಜಾರಿ ನಿರ್ಣಾಯಕ ಘಟ್ಟ ತಲುಪಿದಂತಾಗಿದೆ.
ಏನಿದು ಎಂಪರಿಕಲ್ ಡೇಟಾ?
ವಸ್ತುನಿಷ್ಠ ಸಾಕ್ಷ್ಯಾಧಾರ ಆಧರಿಸಿ ಸಿದ್ಧಪಡಿಸಿರುವ ದತ್ತಾಂಶ. ಇದನ್ನು ಮರು ಪರಿಶೀಲನೆ ಅಥವಾ ಪರೀಕ್ಷೆಗೆ ಒಳಪಡಿಸಲು ಯೋಗ್ಯವಾಗಿರುವಷ್ಟು ವೈಜ್ಞಾನಿಕವಾಗಿರಬೇಕು. ಅಂತಹ ದತ್ತಾಂಶವನ್ನು ಆಧರಿಸಿ ಮಾತ್ರ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಅರ್ಥದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಇದೆ. ಹೀಗಾಗಿ ಯಾವ ರೀತಿಯ ದತ್ತಾಂಶ ಸೂಕ್ತ ಎಂಬ ಬಗ್ಗೆ ಆಯೋಗದಿಂದ ವರದಿ ಪಡೆಯಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.