ಸಾರಾಂಶ
ತುಂತುರಾಗಿ ಬೀಳುವ ಮಳೆ ನೀರು ಬೆಳೆದು ಕಟಾವಿಗೆ ಬಂದ ಬೆಳೆಗಳಿಗೆ ಸಾಲುವುದಿಲ್ಲ. ನೀರಿಲ್ಲದೆ ಬೆಳೆ ಬಾಡುವ ಪರಿಸ್ಥಿತಿ ಇದ್ದು, ಕೂಡಲೇ ನೀರು ಹರಿಸಿ ಬೆಳೆ ಉಳಿಸಲು ಮುಂದಾಗಬೇಕು. ಜೊತೆಗೆ ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಹೆಚ್ಚಿನ ನೀರು ಅವಶ್ಯಕವಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದ್ದರೂ ಸ್ಥಳೀಯ ನಾಲೆಗಳಿಗೆ ನೀರು ಹರಿಸದಿರುವುದನ್ನು ಖಂಡಿಸಿ, ರೈತರು ಕೆಆರ್‌ಎಸ್ ನೀರಾವರಿ ಕಚೇರಿ ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.ಬೆಳಗೊಳ ರೈತ ಮುಖಂಡ ಸುನೀಲ್ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಮುಖಂಡರು ಕಚೇರಿ ಬಳಿ ಆಗಮಿಸಿ, ಧರಣಿ ಕುಳಿತು ಸರ್ಕಾರ ಹಾಗೂ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದರೂ ನಾಲೆಗಳಿಗೆ ನೀರು ಹರಿಸದ ಪರಿಣಾಮ ಕಟಾವಿನ ಹಂತಕ್ಕೆ ಬಂದಿರುವ ಕಬ್ಬು, ಇತರೆ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಕಿಡಿಕಾರಿದರು.ಈ ವ್ಯಾಪ್ತಿಯಲ್ಲಿ ತಿಂಗಳಿನಿಂದ ಸರಿಯಾಗಿ ಮಳೆ ಬಿದ್ದಿಲ್ಲ. ಅಲ್ಲಲ್ಲಿ ಸೋನೆ ಸುರಿದಿದ್ದು ಬಿಟ್ಟರೆ ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುವಂತಹ ಮಳೆ ಬಂದಿಲ್ಲ. ವಿಶ್ವೇಶ್ವರಯ್ಯ ನಾಲೆ, ಸಿಡಿಎಸ್ ಹಾಗೂ ವಿರಿಜಾ ನಾಲೆಯ ವ್ಯಾಪ್ತಿಯ ಸಂಪರ್ಕ ನಾಲೆಯಲ್ಲಿ ನೂರಾರು ಎಕರೆ ಕೃಷಿ ಜಮೀನುಗಳಿಗೆ ಕಬ್ಬು ಇತರ ಬೆಳೆಗಳಿಗೆ ನೀರಿನ ಅವಶ್ಯವಿದೆ ಎಂದು ಆಗ್ರಹಿಸಿದರು.
ತುಂತುರಾಗಿ ಬೀಳುವ ಮಳೆ ನೀರು ಬೆಳೆದು ಕಟಾವಿಗೆ ಬಂದ ಬೆಳೆಗಳಿಗೆ ಸಾಲುವುದಿಲ್ಲ. ನೀರಿಲ್ಲದೆ ಬೆಳೆ ಬಾಡುವ ಪರಿಸ್ಥಿತಿ ಇದ್ದು, ಕೂಡಲೇ ನೀರು ಹರಿಸಿ ಬೆಳೆ ಉಳಿಸಲು ಮುಂದಾಗಬೇಕು. ಜೊತೆಗೆ ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಹೆಚ್ಚಿನ ನೀರು ಅವಶ್ಯಕವಿದೆ. ಸಿಡಿಎಸ್ ಹಾಗೂ ವಿರಿಜಾ ನಾಲೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳೆದ ಕಬ್ಬಿಗೆ ತುರ್ತಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ, ನೀರಾವರಿ ಇಲಾಖೆಯ ಎಇಇ ಕಿಶೋರ್ ಅವರಿಗೆ ಮನವಿ ಸಲ್ಲಿಸಿದರು.ನಾಲೆಗಳ ಕಾಮಗಾರಿಗಳು ನಡೆಯುತ್ತಿವೆ. ನಾಲೆಗಳಲ್ಲಿ ಗಿಡಗಂಟಿ ಬೆಳೆದುಕೊಂಡಿದೆ. ಅವುಗಳ ತೆರವು ಮಾಡಿ ನಂತರ ನೀರು ಹರಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಹರೀಶ್, ವಿಷಕಂಠು, ವಿನಯ್, ಸಿದ್ದಪ್ಪ, ದಾಸೇಗೌಡ, ರವಿ, ಪಾಪಯ್ಯ, ಶಿವಕುಮಾರ್ ಸೇರಿ ಇತರೆ ರೈತ ಮುಖಂಡರು ಹಾಜರಿದ್ದರು.