ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಮಂಗಳವಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪ್ರಕಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪ್ರಕಟಿಸಿದರು.ಅಪರ ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿಯಲ್ಲಿ ಮಂಗಳವಾರ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿ ಪ್ರಕಟ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮತದಾರರ ನೋಂದಣಿ ನಿಯಮಗಳು, 1960ರ ನಿಯಮಗಳಿಗೆ ಅನುಸಾರವಾಗಿ ಸಿದ್ಧಪಡಿಸಿರುವ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ತಹಸೀಲ್ದಾರ್ ರವರ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು ಕಚೇರಿ ವೇಳೆಯಲ್ಲಿ ಪರಿಶೀಲನೆಗಾಗಿ ದೊರೆಯುತ್ತದೆ. ವಿವರಗಳು https://chitradurga.nic.in/en ರಲ್ಲಿಯೂ ಲಭ್ಯವಿರುತ್ತದೆ. ಕರ್ನಾಟಕ ಆಗ್ನೇಯ ಕ್ಷೇತ್ರದ ಮತದಾರರ ಕರಡು ಪಟ್ಟಿಯಲ್ಲಿ 37,198 ಮತದಾರರು ಇದ್ದರು. ಪ್ರಕಟಿತ ಮತದಾರರ ಅಂತಿಮ ಪಟ್ಟಿ ಅನ್ವಯ 24,031 ಪುರುಷರು, 17,327 ಮಹಿಳಾ ಮತದಾರರು ಸೇರಿದಂತೆ ಒಟ್ಟು 41,358 ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಮೊಳಕಾಲ್ಮೂರು ತಾಲೂಕಿನಲ್ಲಿ 2,226 ಪುರುಷರು, 1,080 ಮಹಿಳಾ ಮತದಾರರು ಸೇರಿ ಒಟ್ಟು 3,306 ಮತದಾರರಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲಿ 4,688 ಪುರುಷ, 3,126 ಮಹಿಳೆ ಸೇರಿ ಒಟ್ಟು 7,814,ಚಿತ್ರದುರ್ಗ ತಾಲೂಕಿನಲ್ಲಿ 7,144 ಪುರುಷ, 6273 ಮಹಿಳೆ ಸೇರಿ ಒಟ್ಟು 13,417 ಮತದಾರರು. ಹಿರಿಯೂರು ತಾಲೂಕಿನಲ್ಲಿ 4,185 ಪುರುಷ, 3,075 ಮಹಿಳೆ ಸೇರಿ ಒಟ್ಟು 7260 ಮತದಾರರು, ಹೊಸದುರ್ಗ ತಾಲೂಕಿನಲ್ಲಿ 3,196 ಪುರುಷ, 2,022 ಮಹಿಳೆ ಸೇರಿ ಒಟ್ಟು 5,218 ಮತದಾರರು ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 2,592 ಪುರುಷ, 1,751 ಮಹಿಳಾ ಮತದಾರರು ಸೇರಿ 4,343 ಮತದಾರರಿದ್ದಾರೆ.ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಕೆ ಕುರಿತಂತೆ ರಾಜಕೀಯ ಪಕ್ಷಗಳು ಸಂಪೂರ್ಣ ಸಹಕರಿಸಬೇಕು ಎಂದು ಕೋರಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಬೀಬಿ ಫಾತಿಮಾ, ಚುನಾವಣಾ ಶಿರಸ್ತೆದಾರ್ ಮಲ್ಲಿಕಾರ್ಜುನ್ ನಾಯಕ, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿಎನ್.ಮೈಲಾರಪ್ಪ, ಪದವೀಧರರ ವಿಭಾಗದ ಜಿಲ್ಲಾಧ್ಯಕ್ಷ ಪ್ರಕಾಶ್ ರಾಮಾನಾಯ್ಕ್, ಕಾರ್ಯದರ್ಶಿ ನಾಸಿರುದ್ದೀನ್, ಬಿಜೆಪಿ ಪಕ್ಷದ ವತಿಯಿಂದ ಕಿರಣ್ ಕುಮಾರ್ ಹಾಜರಿದ್ದರು.