ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮೂಲ ಸೌಕರ್ಯಗಳಲ್ಲಿ ಪ್ರಮುಖವಾದ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಎನ್ . ಬಾಲಕೃಷ್ಣ ಅವರು ಹೇಳಿದರು.ಪಟ್ಟಣದ ನುಗ್ಗೇಹಳ್ಳಿ ಬಡಾವಣೆಯ ವಾರ್ಡ್ ನಂ.೧ರಲ್ಲಿ ನದಿ ಮೂಲದಿಂದ ಕುಡಿಯುವ ನೀರು ಕಲ್ಪಿಸುವ ೨೫ ಲಕ್ಷ ರು. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಾಲಿಂಗಪ್ಪ ಬಡಾವಣೆಗೂ ವಿಸ್ತರಿಸಲಾಗುವುದು ಎಂದರು. ೯೪ ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಇಲ್ಲಿನ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಒಂದಷ್ಟು ವ್ಯಾಪ್ತಿಯು ದಿಂಡಗೂರು ಹಾಗೂ ಜನಿವಾರ ಗ್ರಾಮ ಪಂಚಾಯಿತಿಗೆ ಸೇರಲಿದ್ದು, ಕಾನೂನು ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ಅಧಿಕೃತವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಪುರಸಭೆ ವ್ಯಾಪ್ತಿಗೆ ಸೇರಿರುವ ಹಿನ್ನೆಲೆಯಲ್ಲಿ ಯುಜಿಡಿ ವ್ಯವಸ್ಥೆ ಯನ್ನು ಸಹ ಮಹಾಲಿಂಗಪ್ಪ ಲೇಔಟ್ ಸೇರಿದಂತೆ ಇಲ್ಲಿನ ಬಡಾವಣಿಗೂ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಲಭ್ಯವಾಗುವ ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿಗೊಳಿಸಲಾಗುವುದು ಎಂದರಲ್ಲದೆ, ಇತ್ತೀಚಿಗೆ ಮನೆ ಗಣತಿ ಜರುಗಿದ್ದು ನಗರಸಭೆ ಅರಸೀಕೆರೆಯು ೧೯,೨೦೦ ಜನವಸತಿ ಹೊಂದಿದ್ದರೆ, ಪುರಸಭೆ ಚನ್ನರಾಯಪಟ್ಟಣವು ೨೦,೫೦೦ ಮನೆಗಳನ್ನು ಹೊಂದಿದೆ. ಆದ್ದರಿಂದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಹೆಚ್ಚಿನ ಅನು ದಾನ ಅಗತ್ಯವಿದೆ ಎಂದು ತಿಳಿಸಿದರು.ಪಟ್ಟಣದ ಯುಜಿಡಿ ವ್ಯವಸ್ಥೆ ಯನ್ನು ಸೂಕ್ತವಾಗಿ ನಿರ್ವಹಿಸಲು ೧೩೦ ಕೋಟಿ ರು. ಅನುದಾನ ಅಗತ್ಯವಿರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇ.೫೦ ರ? ಅನುದಾನ ನೀಡಿದರೆ ನಾಲ್ಕು ಭಾಗವಾಗಿ ವಿಂಗಡಿಸಿ ಹೈಟೆಕ್ ಮಾದರಿಯಲ್ಲಿ ಯುಜಿಡಿ ವ್ಯವಸ್ಥೆ ಮಾಡಿ ಸರ್ವತೋಮುಖ ಅಭಿವೃದ್ಧಿ ಗೊಳಿಸಲಾಗುವುದು ಎಂದರು.ಸರ್ಕಾರದಿಂದ ೧೫ ನೇ ಹಣಕಾಸಿನ ಯೋಜನೆಯಡಿ ಪಟ್ಟಣದ ಅಭಿ ವೃದ್ಧಿಗೆ ೧.೫೦ ಕೋಟಿ ರು. ಅನುದಾನ ಲಭ್ಯವಾಗಲಿದ್ದು ಚರಂಡಿ ನಿರ್ಮಾಣಕ್ಕೆ ಕೇವಲ ೭೫ ಲಕ್ಷ ರು. ಬಳಕೆ ಮಾಡಬಹುದು. ಇದರಿಂದ ಪಟ್ಟಣವನ್ನು ಪರಿಪೂರ್ಣವಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ಆದರೆ ಪುರಸಭೆಯ ತೆರಿಗೆ ಹಣವು ಸೋರಿಕೆ ಆಗದಂತೆ ಕ್ರಮ ವಹಿಸಿ ೩ರಿಂದ ೪ ವರ್ಷದಲ್ಲಿ ಒಟ್ಟು ೧೫ ಕೋಟಿ ರು. ತೆರಿಗೆ ಹಣದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಪಟ್ಟಣವನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.ಪುರಸಭೆ ಮುಖ್ಯಾಧಿಕಾರಿ ಯತೀಶ್‌ ಕುಮಾರ್‌, ಪುರಸಭೆಯ ಮಾಜಿ ಅಧ್ಯಕ್ಷ ಸುರೇಶ್, ದಿಂಡಗೂರು ಸೊಸೈಟಿ ಮಾಜಿ ಅಧ್ಯಕ್ಷ ನಂಜುಂಡಪ್ಪ, ಮಂಜಣ್ಣ, ರಾಜು, ಶಿವು ಮಂಜುನಾಥ್ ಇನ್ನಿತರರು ಇದ್ದರು.