ಹಿನ್ನೀರಿನ ಪ್ರದೇಶ ಹಾಗೂ ಗಡಿ ಭಾಗದಲ್ಲಿರುವುದರಿಂದ ಈ ಹಿಂದೆ ಸಂಪರ್ಕ ಸಮಸ್ಯೆಯನ್ನು ಎದುರಿಸುತ್ತಿದ್ದ ಬೆಣ್ಣೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ದೈನಂದಿನ ಸಂಚಾರಕ್ಕೆ ಇದು ಪ್ರಮುಖ ಪ್ರಯೋಜನವಾಗಲಿದೆ ಎಂದರು. ಹಲ್ಮಿಡಿ ಹೊಸಮನೆಹಳ್ಳಿ ನಡುವಿನ ಡಾಂಬರು ರಸ್ತೆಯನ್ನು ಬಗೆದು ರೈತರು ಪೈಪುಗಳನ್ನು ಎಳೆದಿದ್ದು ಈ ಭಾಗದ ರಸ್ತೆ ಹಾಳಾಗಿದೆ. ಇವುಗಳನ್ನು ಮುಚ್ಚಿ ದುರಸ್ತಿ ಮಾಡಲು 20 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಯಗಚಿ ಜಲಾಶಯದ ಹಿನ್ನೀರಿನ, ಚಿಕ್ಕಮಗಳೂರು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬೆಣ್ಣೂರು ರಸ್ತೆ ಕಾಮಗಾರಿಗೆ ₹ 40 ಲಕ್ಷ ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಎಚ್. ಕೆ. ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಯಗಚಿ ಜಲಾಶಯದ ಹಿನ್ನೀರಿನ, ಚಿಕ್ಕಮಗಳೂರು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬೆಣ್ಣೂರು ರಸ್ತೆ ಕಾಮಗಾರಿಗೆ ₹ 40 ಲಕ್ಷ ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಎಚ್. ಕೆ. ಸುರೇಶ್ ಹೇಳಿದರು.

ಯಗಚಿ ಜಲಾಶಯ ಹಿನ್ನೀರಿನ ಬೆಣ್ಣೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆಯನ್ನು ನೆರವೇರಿಸಿ ಮಾತನಾಡಿ, ಎತ್ತಿನಹೊಳೆ ನೀರಾವರಿ ಯೋಜನೆಯಡಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಿನ್ನೀರಿನ ಪ್ರದೇಶ ಹಾಗೂ ಗಡಿ ಭಾಗದಲ್ಲಿರುವುದರಿಂದ ಈ ಹಿಂದೆ ಸಂಪರ್ಕ ಸಮಸ್ಯೆಯನ್ನು ಎದುರಿಸುತ್ತಿದ್ದ ಬೆಣ್ಣೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ದೈನಂದಿನ ಸಂಚಾರಕ್ಕೆ ಇದು ಪ್ರಮುಖ ಪ್ರಯೋಜನವಾಗಲಿದೆ ಎಂದರು. ಹಲ್ಮಿಡಿ ಹೊಸಮನೆಹಳ್ಳಿ ನಡುವಿನ ಡಾಂಬರು ರಸ್ತೆಯನ್ನು ಬಗೆದು ರೈತರು ಪೈಪುಗಳನ್ನು ಎಳೆದಿದ್ದು ಈ ಭಾಗದ ರಸ್ತೆ ಹಾಳಾಗಿದೆ. ಇವುಗಳನ್ನು ಮುಚ್ಚಿ ದುರಸ್ತಿ ಮಾಡಲು 20 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಈ ವಾರದಲ್ಲಿ ಕಾಮಗಾರಿ ಶುರುವಾಗಲಿದ್ದು ರೈತರು ಮೊದಲೇ ಪೈಪುಗಳನ್ನು ರಸ್ತೆ ಮಧ್ಯ ಅಳವಡಿಸಿದರೆ ಅನುಕೂಲವಾಗುತ್ತದೆ. ಬೆಣ್ಣೂರು ಬೇಲೂರು ಸಂಪರ್ಕದ ಯಗಚಿ ಸೇತುವೆ ನಿರ್ಮಾಣ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದೆ. ಆದರೆ ನೀರಾವರಿ ಇಲಾಖೆಯಲ್ಲಿ ಹಣ ಇಲ್ಲದೆ ಸಮಸ್ಯೆಯಾಗಿದ್ದು, ತಮ್ಮ ಸರ್ಕಾರ ಬಂದ ತಕ್ಷಣವೇ ಕಾಮಗಾರಿಗೆ ಚಾಲನೆ ದೊರಕಲಿದ್ದು ನಿಮ್ಮೆಲ್ಲರ ಆಶೀರ್ವಾದ ಬಹಳ ಮುಖ್ಯ ಎಂದು ಹೇಳಿದರು.

ಜಿಲ್ಲೆ ಬಿಜೆಪಿ ಮಾಜಿ ಅಧ್ಯಕ್ಷ ರೇಣುಕುಮಾರ್‌ ಬೆಣ್ಣೂರು ಗ್ರಾಮೀಣ ಭಾಗದ ಮೂಲಸೌಕರ್ಯ ವೃದ್ಧಿ ಹಾಗೂ ಗಡಿ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಇದು ಅತ್ಯಂತ ಶ್ಲಾಘನೀಯ ಹೆಜ್ಜೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೂ ತಮ್ಮ ಸ್ವಂತ ಸಾಮರ್ಥ್ಯದಿಂದ ಅನುದಾನ ತಂದು ಬೇಲೂರು ತಾಲೂಕನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಹೇಳಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಶಾಂತ್ ಮಾತನಾಡಿ ಬೆಣ್ಣೂರು ಹಾಗೂ ಸುತ್ತಮುತ್ತ ಗ್ರಾಮಗಳು ಮುಳುಗಡೆ ಗ್ರಾಮದ ಪಟ್ಟಿಯಲ್ಲಿ ಇರುವುದರಿಂದ ನರೇಗಾ ಯೋಜನೆಯಡಿ ತಮ್ಮ ಹೊಲಗಳಿಗೆ ಹೋಗುವ ರಸ್ತೆ ದುರಸ್ತಿ ಮಾಡಲು ಹಾಗೂ ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನಾನುಕೂಲವಾಗಿದೆ ಎಂದು ಶಾಸಕ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಂಕರ್ ಮಲ್ಲೇಗೌಡ್ರು, ಮಹದೇವಯ್ಯ, ಪುನೀತ್ ಜಗದೀಶ್, ಪೂರ್ಣೇಶ್, ಮಂಜುನಾಥ್, ಸುಬ್ರಮಣ್ಯ ಎತ್ತಿನಹೊಳೆ ಎಂಜಿನಿಯರ್‌ಗಳು ಹಾಗೂ ಪಿಆರ್‌ಡಿ ಅಧಿಕಾರಿಗಳು ಇದ್ದರು.