ಕಿಕ್ಕೇರಿ:
ಮರಗಿಡಗಳಿದ್ದರೆ ನಾವು ನೀವು. ನಮ್ಮೆಲ್ಲರ ಬದುಕು ಎಂಬುದನ್ನು ಮರೆತು ಕಾಡು ನಾಡಾದರೆ ವಿಶ್ವವೇ ಅನಾರೋಗ್ಯದ ತೊಟ್ಟಿಲು ಆಗಲಿದೆ ಎಂದು ಪ್ರಾಂಶುಪಾಲ ಎಂ.ಆರ್.ಸಹದೇವು ಎಚ್ಚರಿಕೆ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ಪರಿಸರ ದಿನದ ನೆನಪಿಗೆ ಗಿಡ ನೆಟ್ಟು ಸಂಭ್ರಮಿಸದೆ ನಿಸರ್ಗ ಸ್ವರ್ಗವಾಗಿಸಲು ಗಿಡಮರಗಳಿಂದ ಹಸಿರುಮಯವಾಗಿಸಬೇಕಿದೆ ಎಂದರು.
ನಮಗೆ ಬಿಸಿಲು-ಮಳೆಯಿಂದ ರಕ್ಷಣೆಗಾಗಿ ನೆರಳು ಇರುವಂತೆ ಪರಿಸರ ಉಳಿವಿಗೆ ಮರಗಿಡಗಳು ಅವಶ್ಯಕ ಎಂಬುದನ್ನು ಮರೆಯಬಾರದು. ಭವಿಷ್ಯದ ಮಕ್ಕಳಿಗೆ ಗಿಡಮರಗಳ ಪಾತ್ರ ಪರಿಚಯಿಸದರೆ ಮಾತ್ರ ಆರೋಗ್ಯಕರ ಬದುಕು ಮುಂದಿನ ಪೀಳಿಗೆಗೆ ಸಾಧ್ಯ ಎಂದರು.ಶುದ್ಧ ಗಾಳಿ, ನೀರು, ಆಹಾರ ಎಲ್ಲವೂ ಮಾನವನ ಆರೋಗ್ಯ ಪೂರ್ಣ ಬದುಕಿಗೆ ಬೇಕಿದೆ. ಪ್ಲಾಸ್ಟಿಕ್ ಎಂಬ ಹೆಮ್ಮಾರಿ ನಗರ ಪ್ರದೇಶದಷ್ಟೆ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿದೆ. ಪರಿಣಾಮ ಭೂಮಿ, ನೀರು, ಬೆಳೆದ ಆಹಾರ ಎಲ್ಲವೂ ವಿಷಮಯವಾಗಿದೆ ಎಂದರು.
ಪರಿಸರ ಪ್ರೇಮಿ ಕೆ.ವಿ.ಬಲರಾಮು ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದನ್ನು ಮರೆತು ಅರಣ್ಯ ನಾಶ ಮಾಡಿ ನಮ್ಮಜೀವಕ್ಕೆ ನಾವೇ ಆಪತ್ತು ಸೃಷ್ಟಿಕೊಂಡಿದ್ದೇವೆ. ಮಾನವನಷ್ಟೆ ಜಲಚರ, ಪ್ರಾಣಿ ಪಕ್ಷಿಗಳ ಉಳಿವು ಅವಶ್ಯವಾಗಿದೆ. ಹಣ್ಣು ಹಂಪಲು ನೀಡುವ ನೇರಳೆ, ಹಲಸು, ಮಾವಿನ ಗಿಡ, ಭೂಮಿ ಸವಕಳಿ ತಪ್ಪಿಸಿ, ಅಂರ್ತಜಲ ವೃದ್ಧಿಸಲು, ಶುದ್ಧ ಗಾಳಿಗೆ ಆರಳಿಮರ ನೆಡಿಎಂದು ವಿನಂತಿಸಿದರು.
ಪರಿಸರ ಪ್ರೇಮಿ ಊಗಿನಹಳ್ಳಿ ಮಹೇಶ್ ಮಾತನಾಡಿ, ಹುಟ್ಟಿದ ಹಬ್ಬದಲ್ಲಿ ಕೇಕ್ ಕತ್ತರಿಸುವ ಬದಲುಗಿಡ ನೆಟ್ಟು ಬೆಳೆಸುವ ವಾತಾವರಣ ಸೃಷ್ಟಿಸಿದರೆ ತನ್ನಿಂದ ತಾನೇ ಪರಿಸರ ಸಂರಕ್ಷಣೆಯಾಗಲಿದೆ ಎಂದರು.
ಕಾಲೇಜು ಆವರಣದಲ್ಲಿ ವಿವಿಧ ಬಗೆಯಗಿಡ ನೆಟ್ಟು ನೀರೆರೆಯಲಾಯಿತು. ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನ ಹಾಗೂ ಸ್ಪಂದನಾ ಫೌಂಡೇಷನ್ ವತಿಯಿಂದ ಗಿಡ ವಿತರಿಸಲಾಯಿತು. ಮಕ್ಕಳು ಗಿಡ ನೆಟ್ಟು ಬೆಳೆಸುವುದಾಗಿ ಪ್ರತಿಜ್ಞೆ ಮಾಡಿದರು. ಎನ್.ಎ.ನಾಗೇಶ್, ಅರ್ಪಿತಾ, ಚಂದ್ರಿಕಾ, ಲಾವಣ್ಯ, ಸಹನಾ, ಫಾಜಿಲ್ಲ ಖಾನಂ, ಊಗಿನಹಳ್ಳಿ ಹೇಮಂತ್ ಮತ್ತಿತರರಿದ್ದರು.